ನವದೆಹಲಿ : ಮಹಿಳೆಯನ್ನು ಆಕೆಯ ಲಿವ್ ಇನ್ ರಿಲೇಷನ್‌ಶಿಪ್ ಗೆಳೆಯ ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆ ವಾಯವ್ಯ ದೆಹಲಿಯ ಅಮನ್ ವಿಹಾರ್ ನಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಮೃತ ಮಹಿಳೆಯನ್ನು ವಾಯುವ್ಯ ದೆಹಲಿಯ ಬಲ್ಬೀರ್ ವಿಹಾರ್ ನಿವಾಸಿ ಎಂದು ಗುರುತಿಸಲಾಗಿದ್ದು, ಆಕೆ ಪಾದರಕ್ಷೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಮಹಿಳೆ ತನ್ನ ಪತಿಯನ್ನು ತೊರೆದು ಕಳೆದ ಆರು ವರ್ಷಗಳಿಂದ ಆರೋಪಿ ಮೋಹಿತ್ ಎಂಬಾತನೊಂದಿಗೆ ವಾಸಿಸುತ್ತಿದ್ದಳು. ಅಷ್ಟೇ ಅಲ್ಲದೇ ಆಕೆಯ ಇಬ್ಬರು ಮಕ್ಕಳು ಇವರಿಬ್ಬರ ಜೊತೆಯಲ್ಲೇ ವಾಸಿಸುತ್ತಿದ್ದರು.
ಮೋಹಿತ್ ತನ್ನ ಸ್ನೇಹಿತರೊಂದಿಗೆ ಡ್ರಗ್ಸ್ ಸೇವಿಸುತ್ತಿರುವುದನ್ನು ಕಂಡ ಮಹಿಳೆ, ಆತನ ಜೊತೆ ಜಗಳವಾಡಿದ್ದಾಳೆ. ಈ ವೇಳೆ ಮೋಹಿತ್ ಕೋಪಗೊಂಡು ಮಹಿಳೆ ಮೇಲೆ ಟರ್ಪಂಟೈನ್ ಆಯಿಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರ ಗಾಯಗಳಾಗಿದ್ದ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದಾಳೆ.
ಫೆ. 11ರಂದು ಸುಟ್ಟ ಗಾಯಗಳೊಂದಿಗೆ ಮಹಿಳೆ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಲಾಯಿತು. ಆದರೆ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡುವ ಸ್ಥಿತಿಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಮೋಹಿತ್ ನನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.










