ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪತಿ ನಿಧನ…

63
firstsuddi

ಪುಣೆ: ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ಡಾ. ದೇವಿಸಿಂಗ್ ರಾಂಸಿಂಗ್ ಶೇಖಾವತ್(88) ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಮೂಲಗಳ ಪ್ರಕಾರ ಶೇಖಾವತ್ ಫೆಬ್ರವರಿ 12 ರಂದು ಪುಣೆಯ ತಮ್ಮ ಮನೆಯ ಹೊರಗೆ ಕುಸಿದು ಬಿದ್ದಿದ್ದರು ಎನ್ನಲಾಗಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಅವರು ಅಧಿಕ ರಕ್ತದೊತ್ತಡ, ಮೂತ್ರಪಿಂಡ ವೈಫಲ್ಯ ಸೇರಿದಂತೆ ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದೇ ಅವರ ಸಾವಿಗೆ ಕಾರಣ ಎನ್ನಲಾಗಿದೆ. ಶೇಖಾವತ್ ಅವರ ಅಂತ್ಯಕ್ರಿಯೆ ಸಂಜೆ 7 ಗಂಟೆಗೆ ವೈಕುಂಠಧಾಮ್ ಸ್ಮಶಾನದಲ್ಲಿ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

1972ರಲ್ಲಿ ಬಾಂಬೆ ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರದಲ್ಲಿ ದೇವಿಸಿಂಗ್ ಶೇಖಾವತ್ ಪದವಿ ಪಡೆದುಕೊಂಡಿದ್ದರು. ಕೆಲವು ಸಮಯ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಶೇಖಾವತ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದು(ಎನ್ ಸಿಪಿ) 1985ರಲ್ಲಿ ಅಮರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ 1990ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲುಕಂಡಿದ್ದರು. ನಂತರ ಅಮರಾವತಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಿ ಅಮರಾವತಿಯ ಮೊದಲ ಮೇಯರ್ ಆಗಿ ಆಯ್ಕೆಯಾಗಿದ್ದರು.

ದೇವಿಸಿಂಗ್ ಶೇಖಾವತ್ ಅವರು ಜುಲೈ 7, 1965ರಂದು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರನ್ನು ವಿವಾಹವಾಗಿದ್ದರು. ಈ ದಂಪತಿಗೆ ರಾಜೇಂದ್ರ ಸಿಂಗ್ ಶೇಖಾವತ್ ಎಂಬ ಮಗ ಹಾಗೂ ಜ್ಯೋತಿ ರಾಥೋಡ್ ಎಂಬ ಮಗಳಿದ್ದಾರೆ. ರಾಜೇಂದ್ರ ಅವರು ಅಮರಾವತಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು.