ನವದೆಹಲಿ : ತೈಲ ಮಾರುಕಟ್ಟೆ ಕಂಪನಿಗಳು ಮಾರ್ಚ್ ತಿಂಗಳ ಮೊದಲ ದಿನದಂದೇ ಎಲ್ಪಿಜಿ ಸಿಲಿಂಡರ್ ಬೆಲೆ ಹೆಚ್ಚಿಸುವ ಮೂಲಕ ಜನಸಾಮಾನ್ಯರಿಗೆ ಶಾಕ್ ನೀಡಿದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಗಳ ಬೆಲೆಯನ್ನು 350.50 ಹಾಗೂ ಗೃಹಬಳಕೆಯ ಸಿಲಿಂಡರ್ ಗಳ ಬೆಲೆಯನ್ನು 50 ರೂ.ರಷ್ಟು ಹೆಚ್ಚಿಸಿವೆ. ನೂತನ ದರ ಇಂದಿನಿಂದ ಜಾರಿಗೆ ಬರಲಿದೆ.
ಪರಿಷ್ಕೃತ ದರಗಳ ಪ್ರಕಾರ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ಪ್ರತಿ ಯೂನಿಟ್ ಗೆ 2,119.50 ರೂ. ಹಾಗೂ ಗೃಹ ಬಳಕೆಯ ಸಿಲಿಂಡರ್ ಬೆಲೆ ಪ್ರತಿ ಯೂನಿಟ್ ಗೆ 1,103 ರೂ. ಆಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 1,055.50 ರೂ. ಆಗಿದೆ.
ತೈಲ ಮಾರುಕಟ್ಟೆ ಕಂಪನಿಗಳು ಕೊನೆಯ ಬಾರಿಗೆ ಜನವರಿ ತಿಂಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಏರಿಕೆ ಮಾಡಿದ್ದವು. ತೈಲ ಮಾರುಕಟ್ಟೆ ಕಂಪನಿಗಳು ಸಾಮಾನ್ಯವಾಗಿ ಪ್ರತಿ ತಿಂಗಳ ಆರಂಭದಲ್ಲಿ ಮತ್ತು ಮಧ್ಯದಲ್ಲಿ ಎಲ್ಪಿಜಿ ಬೆಲೆ ಬದಲಾವಣೆಯನ್ನು ಪ್ರಕಟಿಸುತ್ತವೆ.










