ಅಥೆನ್ಸ್ : ಪ್ರಯಾಣಿಕ ರೈಲು ಹಾಗೂ ಸರಕು ಸಾಗಣೆ ರೈಲಿನ ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ 16 ಮಂದಿ ಮೃತಪಟ್ಟರೆ, 85ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಥೆನ್ಸ್ ನ ಉತ್ತರ ಭಾಗದಲ್ಲಿ ಸುಮಾರು 380 ಕಿಲೋಮೀಟರ್(235 ಮೈಲು ದೂರ) ದೂರದಲ್ಲಿರುವ ಟೆಂಪೆ ಬಳಿ ಅವಘಡ ಸಂಭವಿಸಿದೆ. ಅಪಘಾತದಿಂದಾಗಿ ಹಲವು ಬೋಗಿಗಳು ಹಳಿತಪ್ಪಿದ್ದು, ಈ ಪೈಕಿ 3 ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ 25 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಲಾರಿಸ್ಸಾ ನಗರದ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಹತ್ತಿರದ ನಗರಗಳಿಂದ ಆಂಬ್ಯುಲೆನ್ಸ್ ಗಳನ್ನು ಕರೆಸಲಾಗಿದೆ, ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.










