ನವದೆಹಲಿ : ಶಾಲಾ-ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್ ನಿಷೇಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ತ್ರಿ ಸದಸ್ಯ ಪೀಠ ರಚಿಸಿ ಶೀಘ್ರದಲ್ಲೇ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಸ್ಲಿಂ ವಿದ್ಯಾರ್ಥಿನಿಯರ ಪರ ವಾದ ಮಂಡಿಸಿದ ಮಹಿಳಾ ವಕೀಲ ಶದನ್ ಫರಾಸತ್ ಅವರು, ಪರೀಕ್ಷೆಗಳು ನಡೆಯುತ್ತಿರುವುದರಿಂದ ಹೆಣ್ಣುಮಕ್ಕಳು ಇನ್ನೊಂದು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿದರು. ಈ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ನಾವು ಇದಕ್ಕಾಗಿ ವಿಶೇಷ ಪೀಠವನ್ನು ರಚಿಸುತ್ತೇವೆ ಎಂದು ಸ್ಪಷ್ಟಪಡಿಸಿದೆ.
ಆರಂಭದಲ್ಲಿ ಸಿಜೆಐ ಈ ವಿಷಯವನ್ನು ಹೋಳಿ ರಜೆಯ ನಂತರ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಐದು ದಿನಗಳ ನಂತರ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಅವರು ಒಂದು ವರ್ಷ ತಪ್ಪಿಸಿಕೊಂಡಿದ್ದಾರೆ, ವಿಚಾರಣೆ ವಿಳಂಬವಾದರೆ ಮತ್ತೊಂದು ವರ್ಷ ಪರೀಕ್ಷೆ ತಪ್ಪಿಸಿಕೊಳ್ಳುತ್ತಾರೆ ಎಂದು ವಕೀಲರು ವಾದ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಡಿ.ವೈ ಚಂದ್ರಚೂಡ್, ನೀವೂ ಕೊನೆ ಕ್ಷಣದಲ್ಲಿ ಬಂದು ಮನವಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ವಕೀಲರು ಕಳೆದ 10 ದಿನಗಳಲ್ಲಿ ಎರಡು ಬಾರಿ ಈ ಬಗ್ಗೆ ಪ್ರಸ್ತಾಪಿಸಿದೆ. ಅದಾಗ್ಯೂ ನ್ಯಾಯಾಲಯ ಪೀಠವನ್ನು ರಚನೆ ಮಾಡಿಲ್ಲ ಎಂದರು. ಬಳಿಕ ಸಿಜೆಐ ಶೀಘ್ರದಲ್ಲಿ ತ್ರಿ ಸದಸ್ಯ ಪೀಠ ರಚಿಸಿ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.










