ಶೂಟಿಂಗ್ ವೇಳೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
‘ಪ್ರಾಜೆಕ್ಟ್ ಕೆ’ ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ್ದು, ಅಮಿತಾಭ್ ಬಚ್ಚನ್ ಪಕ್ಕೆಲುಬಿಗೆ ಗಂಭೀರ ಗಾಯವಾಗಿದೆ. ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಅವರು ಗಾಯಗೊಂಡಿದ್ದು, ಚಿಕಿತ್ಸೆ ಬಳಿಕ ಅವರಿಗೆ ಬೆಡ್ ರೆಸ್ಟ್ಗೆ ವೈದ್ಯರು ಸಲಹೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಖುದ್ದು ಮಾಹಿತಿ ನೀಡಿರುವ ಅಮಿತಾಭ್ ಬಚ್ಚನ್, ಚಿತ್ರೀಕರಣದ ವೇಳೆ ಪಕ್ಕೆಲುಬಿನ ಕಾರ್ಟಿಲೇಜ್ ಮುರಿದಿದೆ, ಹೈದರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮುಂಬೈನಲ್ಲಿರುವ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಾಜೆಕ್ಟ್ ಕೆ ಹಿಂದಿ ಮತ್ತು ತೆಲುಗಿನಲ್ಲಿ ಸಿದ್ದವಾಗುತ್ತಿರುವ ದ್ವಿಭಾಷಾ ಸಿನಿಮಾವಾಗಿದ್ದು, ಅಶ್ವಿನ್ ಅವರು ನಿರ್ದೇಶಿಸುತ್ತಿದ್ದಾರೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿದ್ದಾರೆ.










