ಬೆಂಗಳೂರು : ಸಂಸತ್ತಿನಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಲೇ ಬಂದಿರುವ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸಂಸದೆ ಸುಮಲತಾ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಭಾನುವಾರ ಪ್ರಧಾನಿ ಆಗಮಿಸುತ್ತಿರೋ ಹೊತ್ತಲ್ಲೇ ಪಕ್ಷ ಸೇರ್ಪಡೆಗೆ ಸಂಸದೆ ಸುಮಲತಾ ಬಯಸಿದ್ದರು. ಆದರೆ ಇದು ಸರ್ಕಾರಿ ಕಾರ್ಯಕ್ರಮ ಆಗಿರೋದ್ರಿಂದ ಇಂದೇ ಪಕ್ಷ ಸೇರಲು ಬಯಸಿದ್ದಾರೆ ಅಂತ ಪುಟ್ಟರಾಜು ಹೇಳಿದ್ದಾರೆ. ಈ ಬೆನ್ನಲ್ಲೇ ಇಂದು ಮಧ್ಯಾಹ್ನ 12 ಗಂಟೆಗೆ ಮಂಡ್ಯದ ತಮ್ಮ ನಿವಾಸದಲ್ಲಿ ಸುಮಲತಾ ಸುದ್ದಿಗೋಷ್ಟಿ ಕರೆದಿದ್ದು, ಬಿಜೆಪಿ ಸೇರೋ ಬಗ್ಗೆ ನಿರ್ಧಾರ ಪ್ರಕಟಿಸೋ ಸಾಧ್ಯತೆಗಳಿವೆ. ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಸುಮಲತಾ ಇತ್ತೀಚೆಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದು ಹಲವು ಕುತೂಹಲಕ್ಕೆ ಕಾರಣವಾಗಿತ್ತು. ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ಮನೆಗೆ ತೆರಳಿ ಸುಮಲತಾ ತುಸು ಹೊತ್ತು ಚರ್ಚೆ ನಡೆಸಿದ್ದರು. ಒಟ್ಟಿನಲ್ಲಿ ಇಂದೇ ಬಿಜೆಪಿ ಸೇರ್ಪಡೆಯಾಗ್ತಾರಾ ಎಂಬುದನ್ನ ಕಾದು ನೋಡಬೇಕಿದೆ.










