ರಾಜ್ಯದಲ್ಲಿ ಹೆಚ್3ಎನ್2ಗೆ ಮೊದಲ ಬಲಿ…

43
firstsuddi

ಹಾಸನ: ಎಲ್ಲೆಡೆ ಆತಂಕ ಸೃಷ್ಟಿಸಿರುವ ಹೆಚ್3ಎನ್2 ವೈರಸ್ ಗೆ ಕರ್ನಾಟಕದಲ್ಲಿ ಮೊದಲ ಬಲಿಯಾಗಿದೆ. ಹೆಚ್3ಎನ್2 ವೈರಸ್ ನಿಂದ ಬಳಲುತ್ತಿದ್ದ ಹಾಸನ ಮೂಲದ 85 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

ಜ್ಚರ, ಗಂಟಲುನೋವು, ಕೆಮ್ಮಿನಿಂದ ಬಳಲುತ್ತಿದ್ದ ಹಾಸನ ಜಿಲ್ಲೆ ಆಲೂರು ಮೂಲದ ವೃದ್ದ ಮಾರ್ಚ್ 1 ರಂದು ಆಲೂರಿನಲ್ಲಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಗೆ ಮಾರಣಾಂತಿಕ ಸೋಂಕು ಇದ್ದುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಡಿಎಚ್ ಓ ಡಾ.ಶಿವಸ್ವಾಮಿ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮಾವಾಗಿ ಮೃತ ವ್ಯಕ್ತಿಯ ಗ್ರಾಮದ ಸುತ್ತಮುತ್ತಲ ಹಳ್ಳಿಯಲ್ಲಿ ಅರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಅನಾರೋಗ್ಯ ಪೀಡಿತ ಜನರನ್ನು ವೈದ್ಯರ ತಂಡ ತಪಾಸಣೆ ಮಾಡುತ್ತಿದೆ. ಎಲ್ಲರ ಅರೋಗ್ಯ ತಪಾಸಣೆ ನಡೆಸಿ ಪರೀಕ್ಷೆಗಾಗಿ ಗಂಟಲು ದ್ರವವನ್ನು ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್3ಎನ್2 ವೈರಸ್ ಹೆಚ್ಚಾಗುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಮೊದಲ ಸಾವು ಸಂಭವಿಸಿದ್ದು, ಇದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಆರೋಗ್ಯ ಸಚಿವ ಡಾ. ಕೆ ಸುಧಾಕರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದ ರಾಜ್ಯ ಸರ್ಕಾರ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಹೆಚ್3ಎನ್2 ವೈರಸ್ ನಿಂದ ಹರಡುವ ಸೋಂಕು ಕನಿಷ್ಠ 5ರಿಂದ 7 ದಿನಗಳ ವರೆಗೆ ಇರುತ್ತದೆ. ಗರ್ಭಿಣಿಯರು, ಮಕ್ಕಳು, ವೃದ್ಧರಿಗೆ ಬೇಗ ಸೋಂಕು ಹರಡುತ್ತದೆ. 15 ವರ್ಷದಿಂದ 65 ವರ್ಷದವರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ವಯೋಮಾನದವರು ಹಾಗೂ ಎಲ್ಲರೂ ಬಹಳ ಎಚ್ಚರಿಕೆ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.