ಉದ್ಯೋಗಕ್ಕಾಗಿ ಭೂಮಿ ಹಗರಣ : ವಿಚಾರಣೆಗೆ ಹಾಜರಾಗುವಂತೆ ತೇಜಸ್ವಿ ಯಾದವ್‍ಗೆ ಸಿಬಿಐ ಸಮನ್ಸ್…

43
firstsuddi

ನವದೆಹಲಿ : ಉದ್ಯೋಗಕ್ಕಾಗಿ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ನೀಡಿದೆ. ನಿನ್ನೆ ಇಡಿ ತೇಜಸ್ವಿ ಯಾದವ್ ಅವರ ಮನೆಯ ಮೇಲೆ ದಾಳಿ ನಡೆಸಿತ್ತು.

ಮಾರ್ಚ್ 4 ರಂದು ಯಾದವ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಆದರೆ, ಅವರು ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿರಲಿಲ್ಲ. ನಂತರ ಇಂದು ಮತ್ತೆ ಸಮನ್ಸ್ ನೀಡಿ ವಿಚಾರಣೆ ಬರುವಂತೆ ಹೇಳಲಾಗಿದೆ.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕನನ್ನು ಇಂದು ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಆದರೆ, ಅವರು ಇನ್ನೂ ಇಲ್ಲಿನ ಕೇಂದ್ರೀಯ ತನಿಖಾ ದಳದ (ಸಿಬಿಐ) ಪ್ರಧಾನ ಕಚೇರಿಗೆ ಆಗಮಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾಲು ಪ್ರಸಾದ್ ಯಾದವ್ ಅವರು 2004 ಮತ್ತು 2009 ರ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದಾಗ ತಮ್ಮ ಕುಟುಂಬಕ್ಕೆ ಜಮೀನನ್ನು ಉಡುಗೊರೆಯಾಗಿ ನೀಡಿದವರು ಅಥವಾ ಅಗ್ಗದ ದರದಲ್ಲಿ ಮಾರಾಟ ಮಾಡಿದ್ದ ಕುಟುಂಬಗಳಿಗೆ ರೈಲ್ವೆಯಲ್ಲಿ ಉದ್ಯೋಗ ನೀಡಿದ್ದರು ಎಂಬ ಆರೋಪವಿದೆ.