ಆಸ್ಕರ್ ವಿಜೇತರಿಗೆ ಪ್ರಧಾನಿ ಮೋದಿ ಅಭಿನಂದನೆ…

51
firstsuddi

ಲಾಸ್ ಏಂಜಲಿಸ್(ಯುಎಸ್‍ಎ) : 2023ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾರತ ಎರಡು ಪ್ರಶಸ್ತಿಗಳನ್ನು ಗೆದ್ದಿದೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಓರಿಜನ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದರೆ, ಡಾಕ್ಯುಮೆಂಟರಿ ವಿಭಾಗದಲ್ಲಿ ಕಾರ್ತಿಕಿ ನಿರ್ದೇಶನದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಎರಡೂ ತಂಡಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

‘ನಾಟು ನಾಟು..’ ಹಾಡಿನ ಬಗ್ಗೆ ಮೋದಿ ಟ್ವೀಟ್ : ಜಾಗತಿಕ ಮಟ್ಟದಲ್ಲಿ ನಾಟು ನಾಟು ಹಾಡು ಜನಪ್ರಿಯತೆ ಪಡೆದುಕೊಂಡಿದೆ. ಇದು ಮುಂದಿನ ಕಾಲಕ್ಕೂ ನೆನಪಿನಲ್ಲಿ ಉಳಿಯುವಂತಹ ಹಾಡು. ಪ್ರತಿಷ್ಠಿತ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ, ಗೀತರಚನಕಾರ ಚಂದ್ರಬೋಸ್ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು. ಭಾರತಕ್ಕೆ ಸಂತಸ ಮತ್ತು ಹೆಮ್ಮೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 5.30 ರಿಂದ ಪ್ರಶಸ್ತಿ ಪ್ರದಾನ ಸಮಾರಂಭ ಶುರುವಾಯಿತು. ಭಾರತಕ್ಕೆ ಮೊದಲ ಪ್ರಶಸ್ತಿಯು ‘ದಿ ಎಲಿಫೆಂಟ್ ವಿಸ್ಪರರ್ಸ್’ ಪಡೆದುಕೊಳ್ಳುವ ಮೂಲಕ ಶುಭಾರಂಭ ಮಾಡಿತು. ಈ ಪ್ರಶಸ್ತಿ ಪ್ರಕಟವಾದ ಕೆಲವೇ ಹೊತ್ತಿಗೆ ನಾಟು ನಾಟು ಹಾಡಿಗೂ ಆಸ್ಕರ್ ಪ್ರಶಸ್ತಿ ಘೋಷಣೆ ಆಯಿತು. ಆಲ್ ದೆಟ್ ಬ್ರೆತ್ಸ್ ಡಾಕ್ಯುಮೆಂಟರಿಗೂ ಪ್ರಶಸ್ತಿ ಬಂದರೆ, ಭಾರತ ಹ್ಯಾಟ್ರಿಕ್ ಸಾಧಿಸಲಿದೆ ಎನ್ನುವ ನಿರೀಕ್ಷೆಯಿತ್ತು. ಆದರೆ, ‘ರಷ್ಯನ್ ನಾವಲ್ನಿ’ ಡಾಕ್ಯುಮೆಂಟರಿ ಪ್ರಶಸ್ತಿ ಪಡೆಯುವ ಮೂಲಕ ಆಲ್ ದೆಟ್ ಬ್ರೆತ್ಸ್ ಅನ್ನು ಹಿಂದಿಕ್ಕಿತು.