ಬೆಂಗಳೂರು : ಕೆಪಿಟಿಸಿಎಲ್ ನೌಕರರಿಗೆ ಶೇ.20 ರಷ್ಟು ವೇತನ ಮತ್ತು ಸಾರಿಗೆ ನೌಕರರಿಗೆ ಶೇ.15 ರಷ್ಟು ವೇತನ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದ್ದು, ಈ ಕುರಿತು ಇಂದೇ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಟಿಸಿಎಲ್ ನೌಕರರು ವೇತನ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದರು. ನಮ್ಮ ಮಂತ್ರಿಗಳು ಸುದೀರ್ಘವಾಗಿ ಚರ್ಚಿಸಿ ಶೇ. 20ರಷ್ಟು ವೇತನ ಪರಿಷ್ಕರಣೆಗೆ ಒಪ್ಪಿದ್ದು, ಇಂದೇ ಆದೇಶ ಹೊರಡಿಸುತ್ತೇನೆ ಎಂದರು.
ಸಾರಿಗೆ ಇಲಾಖೆ ನೌಕರರಿಂದಲೂ ಸಹ ವೇತನ ಹೆಚ್ಚಳದ ಬೇಡಿಕೆ ಇದೆ. ಅದನ್ನು ಕೂಡ ಸಾರಿಗೆ ಸಚಿವರಾದ ಶ್ರೀರಾಮುಲು ಮತ್ತು ಅಧಿಕಾರಿಗಳ ಜೊತೆ ಎರಡು ಮೂರು ಸುತ್ತು ಮಾತುಕತೆ ನಡೆಸಿದ್ದು, ಎಲ್ಲಾ ರೀತಿಯ ಪರಿಶೀಲನೆಯ ನಂತರ ಸಾರಿಗೆ ನಿಗಮಗಳ ನೌಕರರಿಗೆ ಶೇ.15 ರಷ್ಟು ವೇತನ ಹೆಚ್ಚಿಸುವ ತೀರ್ಮಾನ ಮಾಡಲಾಗಿದೆ. ಎರಡೂ ಆದೇಶಗಳು ಇಂದೇ ಹೊರಬೀಳಲಿವೆ ಎಂದು ತಿಳಿಸಿದರು.
ಬೇಸಿಗೆ ಕಾಲದಲ್ಲಿ ಅಲ್ಲಲ್ಲಿ ಕಾಡ್ಗಿಚ್ಚು ಆಗುತ್ತಿದೆ. ಸಾಧ್ಯತೆ ಇರುವೆಡೆಯಲ್ಲಿ ಪೂರ್ವಭಾವಿ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಪ್ರಸ್ತುತ ಕಾಡ್ಗಿಚ್ಚನ್ನು ನಂದಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ಗಡಿ ಭಾಗದ ಜನರಿಗೆ ಆರೋಗ್ಯ ವಿಮೆ ಯೋಜನೆಯನ್ನು ಮಹಾರಾಷ್ಟ್ರದ ಸಂಪುಟ ನಿರ್ಣಯ ಘೋಷಿಸಿರುವುದು ಅಕ್ಷಮ್ಯ ಅಪರಾಧ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದಾಗ ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಕಾಯಬೇಕು. ಯಾವುದೇ ಪ್ರಚೋದನೆ ಆಗಬಾರದೆಂದು ಒಪ್ಪಲಾಗಿತ್ತು. ಈಗ ಅದರ ಉಲ್ಲಂಘನೆಯಾಗಿದೆ. ಕೂಡಲೇ ಈ ನಿರ್ಧಾರವನ್ನು ಹಿಂದೆಗೆದುಕೊಳ್ಳಬೇಕು. ಈ ವಿಚಾರವನ್ನು ಗೃಹ ಸಚಿವರ ಗಮನಕ್ಕೂ ತರಲಾಗುವುದು ಎಂದು ತಿಳಿಸಿದರು.
ಈ ರೀತಿಯ ಯೋಜನೆಗಳನ್ನು ನಾವು ಕೂಡಾ ಪ್ರಕಟಿಸಬಹುದು. ಹಲವಾರು ತಾಲೂಕುಗಳು, ಗ್ರಾಮ ಪಂಚಾಯಿತಿಗಳು ಮಹಾರಾಷ್ಟ್ರದಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲ, ಕರ್ನಾಟಕಕ್ಕೆ ಸೇರಬೇಕು ಎಂದು ಈಗಾಗಲೇ ನಿರ್ಣಯ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಇದ್ದಾಗ ಮಹಾರಾಷ್ಟ್ರದ ಸರ್ಕಾರ ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.
ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಟೋಲ್ ಸಂಗ್ರಹದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಟೋಲ್ ಸಂಗ್ರಹದ ಬಗ್ಗೆ ತಕರಾರು ಜನಸಾಮಾನ್ಯರದ್ದಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜಕಾರಣ ಮಾಡುತ್ತಿದ್ದಾರೆ. ಡಿಕೆಶಿ ಬಳಸುವ ಭಾಷೆ, ನಡೆದುಕೊಂಡ ರೀತಿ ಯಾವುದೇ ಕನ್ನಡಿಗರಿಗೆ ಶೋಭೆ ತರುವಂಥದ್ದಲ್ಲ ಎಂದು ಗುಡುಗಿದರು.










