ಲಕ್ನೋ : ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳಲ್ಲಿ ಒಂದಾದ ಸಿಯಾಯಾ ಎಂಬ ಚೀತಾ 4 ಮರಿಗಳಿಗೆ ಜನ್ಮ ನೀಡಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ನಮೀಬಿಯಾದಿಂದ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನಗಳಲ್ಲಿ ಭಾರತಕ್ಕೆ ತರಲಾಗಿತ್ತು. ಅವುಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿತ್ತು.
ಎರಡು ದಿನಗಳ ಹಿಂದೆಯಷ್ಟೇ 8 ಚೀತಾಗಳ ಪೈಕಿ ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದ ಸಾಶಾ ಹೆಸರಿನ 3 ವರ್ಷದ ಚೀತಾ ಮೃತಪಟ್ಟಿತ್ತು. ಇದೀಗ ಇದೇ ಬ್ಯಾಚ್ನ ಮತ್ತೊಂದು ಚೀತಾ 4 ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳು, ಮತ್ತು ತಾಯಿ ಆರೋಗ್ಯವಾಗಿದೆ ಎಂದು ವರದಿಗಳು ತಿಳಿಸಿವೆ.
ಚೀತಾ ಮರಿಗಳಿಗೆ ಜನ್ಮ ನೀಡಿರುವ ಮಾಹಿತಿಯನ್ನು ಕೇಂದ್ರ ಸಚಿವ ಭೂಪೇಂದರ್ ಯಾದವ್ ನೀಡಿದ್ದಾರೆ ಮತ್ತು ಮರಿಗಳ ಮುದ್ದಾದ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಭಿನಂದನೆಗಳು. ಅಮೃತ ಕಾಲದ ಸಮಯದಲ್ಲಿ ನಮ್ಮ ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲಿ ಒಂದು ಮಹತ್ವದ ಘಟನೆ! ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ 2022 ರ ಸೆಪ್ಟೆಂಬರ್ 17 ರಂದು ಭಾರತಕ್ಕೆ ಸ್ಥಳಾಂತರಗೊಂಡ ಚಿರತೆಗಳಲ್ಲಿ ಒಂದಕ್ಕೆ ನಾಲ್ಕು ಮರಿಗಳು ಜನಿಸಿದವು ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.










