ಹೈದರಾಬಾದ್ : ಎಸ್‍ಎಸ್‍ಎಲ್‍ಸಿ ಹಿಂದಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಮೇಲೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
10ನೇ ತರಗತಿ ಹಿಂದಿ ಪರೀಕ್ಷೆ ಸೋಮವಾರ ಬೆಳಗ್ಗೆ 9.30ಕ್ಕೆ ಆರಂಭಗೊಂಡಿತ್ತು. ಆದರೆ ಪರೀಕ್ಷೆ ಪ್ರಾರಂಭವಾದ ಅರ್ಧ ಗಂಟೆಯ ನಂತರ ಪ್ರಶ್ನೆ ಪತ್ರಿಕೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಘಟನೆಯಲ್ಲಿ ಸಂಜಯ್ ಕುಮಾರ್ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಕರೀಂನಗರ ಪೊಲೀಸರ ವಿಶೇಷ ತಂಡವು ಸಂಜಯ್ ಅವರ ನಿವಾಸಕ್ಕೆ ತೆರಳಿ ಬಂಧಿಸಿದರು. ಈ ವೇಳೆ ಬಂಧನವನ್ನು ತಡೆಯಲು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಅವರನ್ನು ವಶಕ್ಕೆ ಪಡೆಯಲಾಯಿತು.
ಏಪ್ರಿಲ್ 8 ರಂದು ಸಿಕಂದರಾಬಾದ್ ನಿಂದ ತಿರುಪತಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಭೇಟಿ ಕೊಡಲಿದ್ದಾರೆ. ಅವರ ವ್ಯವಸ್ಥೆಗೆ ಅಡ್ಡಿಪಡಿಸಲು ಬಿಆರ್ ಎಸ್ ಸರ್ಕಾರದ ಪ್ರಯತ್ನವಾಗಿದೆ ಎಂದು ಸಂಜಯ್ ವಾಗ್ದಾಳಿ ನಡೆಸಿದರು.










