ಬೀಜಿಂಗ್ : ಚೀನಾದ ವಿಜ್ಞಾನಿಯೊಬ್ಬರು ಕೋವಿಡ್ -19 ವೈರಸ್ ಮಾನವರಿಂದಲೇ ಹುಟ್ಟಿಕೊಂಡಿರಬಹುದು ಎಂದು ಹೇಳಿದ್ದಾರೆ.
ಬೀಜಿಂಗ್ ಯೂನಿವರ್ಸಿಟಿ ಆಫ್ ಕೆಮಿಕಲ್ ಟೆಕ್ನಾಲಜಿಯ ಟಾಂಗ್ ಯಿಗಾಂಗ್, ವುಹಾನ್ ನ ಸೀಫುಡ್ ಮಾರ್ಕೆಟ್ ನಿಂದ ತೆಗೆದ ವೈರಲ್ ಮಾದರಿಗಳ ಆನುವಂಶಿಕ ಅನುಕ್ರಮಗಳು ಕೋವಿಡ್ ಸೋಂಕಿತ ರೋಗಿಗಳಿಗೆ ಬಹುತೇಕ ಒಂದೇ ಎಂದು ಹೇಳಿದ್ದು, ಮನುಷ್ಯರಿಂದಲೇ ಕೋವಿಡ್ ಹುಟ್ಟಿಕೊಂಡಿರಬಹುದು ಎಂದು ಹೇಳಿದ್ದಾರೆ.
ವೈರಸ್ ಮೂಲದ ಸಂಶೋಧನೆಗೆ ಸಂಬಂಧಿಸಿದಂತೆ ಚೀನಾದ ಸ್ಟೇಟ್ ಕೌನ್ಸಿಲ್ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಟಾಂಗ್, ಜನವರಿ 2020ರಿಂದ ಮಾರ್ಚ್ 2020ರ ನಡುವೆ ಮಾರುಕಟ್ಟೆಯಲ್ಲಿ 1,300ಕ್ಕೂ ಹೆಚ್ಚು ಪರಿಸರ ಮತ್ತು ಹೆಪ್ಪುಗಟ್ಟಿದ ಪ್ರಾಣಿಗಳ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಸಂಶೋಧಕರು ಪರಿಸರ ಮಾದರಿಗಳಿಂದ ವೈರಸ್ ನ ಮೂರು ತಳಿಗಳನ್ನು ಪ್ರತ್ಯೇಕಿಸಿದ್ದಾರೆ. ರಕೂನ್ ನಾಯಿಗಳು ಕೋವಿಡ್ ವೈರಸ್ ನ ಮೂಲವೆಂದು ಸೂಚಿಸಿದ ಇತ್ತೀಚಿನ ಅಧ್ಯಯನಗಳನ್ನು ಸಾಬೀತುಪಡಿಸಲು ಇನ್ನೂ ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಿದರು.
ಕೋವಿಡ್-19 ಹುಟ್ಟಿಕೊಂಡು 3 ವರ್ಷಗಳು ಕಳೆದರೂ ಸೋಂಕಿನ ಮುಲ ಇನ್ನೂ ನಿಗೂಢ. ಆರಂಭದಲ್ಲಿ ಕೊರೊನಾ ವೈರಸ್ ಬಾವಲಿಗಳಿಂದ ತಗುಲಿದೆ, ಬಳಿಕ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂದು ಜಾಗತಿಕವಾಗಿ ಚರ್ಚೆಯಾಗಿತ್ತು. ಬಳಿಕ ಮಾರಣಾಂತಿಕ ಸೋಂಕು ಚೀನಾದ ವುಹಾನ್ ಪ್ರಾಂತದ ಸಮುದ್ರ ಖಾದ್ಯ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುವ ಸೋಂಕಿತ ರಕೂನ್ ತಳಿಯ ನಾಯಿಗಳಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆಯಿದೆ ಅಂತಾರಾಷ್ಟ್ರೀಯ ವೈರಸ್ ತಜ್ಞರ ತಂಡ ವರದಿ ಮಾಡಿತ್ತು.










