ಚಂಡೀಗಢ: ಪಂಜಾಬ್ನ ಬಟಿಂಡಾ ಸೇನಾ ನೆಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಸೈನಿಕ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
ಪಂಜಾಬ್ನ ಬಟಿಂಡಾ ಸೇನಾ ನೆಲೆಯಲ್ಲಿ ನಿನ್ನೆ ನಸುಕಿನ ವೇಳೆಯಲ್ಲಿ ಅನಾಮಿಕ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಕರ್ನಾಟಕದ ಇಬ್ಬರು ಮತ್ತು ಇನ್ನಿಬ್ಬರು ತಮಿಳುನಾಡಿನ ಮೂಲದವರು ಮೃತಪಟ್ಟಿದ್ದರು. ಮೃತರನ್ನು ಕರ್ನಾಟಕದ ಸಾಗರ್ ಬನ್ನೆ, ಮತ್ತು ಸಂತೋಷ್ ಎಂ ನಾಗರಾಳ್ ,ತಮಿಳುನಾಡಿನ ಯೋಗೇಶ್ ಕುಮಾರ್ ಜೆ, ಮತ್ತು ಕಮಲೇಶ್ ಆರ್, ಎಂದು ಗುರುತಿಸಲಾಗಿದೆ. ಇನ್ನೊಬ್ಬ ಯೊಧನ ತಲೆಗೆ ಗುಂಡು ಬಡಿದು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಹುತಾತ್ಮರಾಗಿದ್ದಾರೆ.
ಗುಂಡಿನ ದಾಳಿ ಬಳಿಕ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಬ್ಯಾರೆಕ್ನಿಂದ ಹೊರಬರುತ್ತಿದ್ದುದ್ದನ್ನು ಸೈನಿಕರೊಬ್ಬರು ನೋಡಿದ್ದಾರೆ. ಗುಂಡುಗಳನ್ನು ತುಂಬಿದ್ದ ಇನ್ಸಾಸ್ ರೈಫಲ್ ಎರಡು ದಿನಗಳ ಹಿಂದೆ ಕಾಣೆಯಾಗಿತ್ತು. ಇದನ್ನು ಬಳಸಿ ದಾಳಿ ನಡೆಸಿರುವ ಸಾಧ್ಯತೆ ಇದೆ. ತನಿಖಾ ತಂಡವೊಂದು ಇನ್ಸಾಸ್ ರೈಫಲ್ ಹಾಗೂ ಗುಂಡುಗಳನ್ನು ಪತ್ತೆ ಹಚ್ಚಿದೆ. ಪಂಜಾಬ್ ಪೊಲೀಸರ ಜೊತೆಗೆ ವಿಚಾರಣಾ ನ್ಯಾಯಾಲಯವು (ಸಿಒಐ) ಘಟನೆ ಕುರಿತು ತನಿಖೆ ಕೈಗೊಳ್ಳಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.










