ಲಕ್ನೋ : ಮಾಜಿ ಸಂಸದ, ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸಾದ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ. ಉತ್ತರಪ್ರದೇಶದ ಝಾನ್ಸಿಯಲ್ಲಿ ಎನ್ಕೌಂಟರ್ ನಡೆದಿದ್ದು, ಎನ್ಕೌಂಟರ್ನಲ್ಲಿ ಗುಲಾಮ್ ಮೊಹಮ್ಮದ್ ನನ್ನು ಕೂಡ ಹತ್ಯೆಗೈಯಲಾಗಿದೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಅಸಾದ್ ಮತ್ತು ಗುಲಾಂ ಬಗ್ಗೆ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂ. ಬಹುಮಾನವನ್ನು ಪೊಲೀಸರು ಘೋಷಿಸಿದ್ದರು. ಇದೀಗ ನಾಪತ್ತೆಯಾಗಿದ್ದ ಈ ಇಬ್ಬರನ್ನು ಇಂದು ಎನ್ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ಇಬ್ಬರಿಂದ ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
2005ರಲ್ಲಿ ಅಲಹಾಬಾದ್ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ನಾಯಕ ರಾಜು ಪಾಲ್ ಗೆದ್ದಿದ್ದರು. ಇದಾದ 1 ತಿಂಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಫೆ.24 ರಂದು ಉಮೇಶ್ ಪಾಲ್ ಅವರನ್ನು ಪ್ರಯಾಗ್ರಾಜ್ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 40 ಜನರನ್ನು ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದಾರೆ. ಗ್ಯಾಂಗ್ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್, ಆತನ ಸಹೋದರ ಮತ್ತು ಮಾಜಿ ಶಾಸಕ ಅಶ್ರಫ್ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ಇವರಿಬ್ಬರೂ ಸದ್ಯ ಜೈಲಿನಲ್ಲಿದ್ದಾರೆ.










