ಕಾಲ್ತುಳಿತಕ್ಕೆ 85 ಮಂದಿ ಸಾವು, ನೂರಾರು ಜನರಿಗೆ ಗಾಯ…

55
firstsuddi

ಸನಾ: ಯೆಮೆನ್’ನ ರಾಜಧಾನಿ ಸನಾದಲ್ಲಿ ರಂಜಾನ್ ಪ್ರಯುಕ್ತ ಆಯೋಜಿಸಲಾಗಿದ್ದ ನೆರವು ನೀಡುವ ಸಮಾರಂಭದಲ್ಲಿ ಕಾಲ್ತುಳಿತದಿಂದಾಗಿ 85 ಮಂದಿ ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿರುವ ಘಟನೆ ನಡೆದಿದೆ.

ಯೆಮೆನ್ ರಾಜಧಾನಿ ಸನಾದ ಬಾಬ್ ಅಲ್-ಯೆಮೆನ್ ಜಿಲ್ಲೆಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ರಂಜಾನ್ ನಿಮಿತ್ತ ಶಾಲೆಯಲ್ಲಿ ಬಡಜನರಿಗೆ ನೆರವು ನೀಡಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಯೆಮೆನಿ ರಿತಾಲ್ಸ್ (1,600 ರೂ), ಬಟ್ಟೆ, ಆಹಾರ ಸೇರಿ ಇನ್ನಿತರೆ ನೆರವನ್ನು ನೀಡುತ್ತಿದ್ದರು.

ಕಾರ್ಯಕ್ರಮದಲ್ಲಿ ನೀಡಲಾದ ಸೌಲಭ್ಯವನ್ನು ಪಡೆಯಲು ಹಲವಾರು ಜನರು ಭಾಗಿಯಾಗಿದ್ದರು. ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಜನರು ಸೇರಿದ್ದರಿಂದ ಜನರನ್ನು ನಿಯಂತ್ರಿಸುವಲ್ಲಿ ಆಯೋಜಕರು ವಿಫಲರಾಗಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತದಲ್ಲಿ 85 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡದೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇನ್ನೂ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆಗೆ ಕಾರಣರಾದ ವಿತಕರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.