ಚಿಕ್ಕಮಗಳೂರು: ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೆ.ಬಿ.ಸುಧಾ ಅವರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇಂದು ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.
ಚುನಾವಣಾ ಪ್ರಚಾರಕ್ಕಾಗಿಯೇ ವಿಶೇಷವಾಗಿ ಸಜ್ಜುಗೊಳಿಸಲಾದ ಬಹುಜನ ವಾಹಿನಿ ವಾಹನದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ತೆರಳಿದ ಅವರು, ತಾಲೂಕಿನ ಹೊಸಪುರ, ಹಿರೇಕೊಳಲೆ ಬ್ಯಾಗದಹಳ್ಳಿ, ಹೆದ್ದಾರಳ್ಳಿ, ನರಗನಹಳ್ಳಿ, ಚಿಕ್ಕೊಳಲೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆ ಮನೆಗೆ ತೆರಲಿ ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸಾದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ದೊರಕಬೇಕಾದರೆ ಮತದಾರರು ಈ ಬಾರಿ ಬಹುಜನ ಸಮಾಜ ಪಕ್ಷವನ್ನು ಚುನಾಯಿಸಬೇಕು ಎಂದು ಮನವಿ ಮಾಡಿದರು.
ಸಂವಿಧಾನವನ್ನು ಇಡಿಯಾಗಿ ಜಾರಿಗೊಳಿಸುವುದು ಮತ್ತು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳನ್ನು ಒದಗಿಸುವುದು ಬಿಎಸ್ಪಿಯಿಂದ ಮಾತ್ರ ಸಾಧ್ಯ ಎಂದರು.
ಕ್ಷೇತ್ರದ ಸರ್ವಾಗೀಣ ಅಭಿವೃದ್ದಿ ಮತ್ತು ಪಾರದರ್ಶಕ ಆಡಳಿತಕ್ಕಾಗಿ ಈ ಬಾರಿ ತಮಗೆ ಮತ ನೀಡುವಂತೆ ಕೋರಿದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಕೆಳ ವರ್ಗದ ಜನ ಇಷ್ಟು ವರ್ಷ ಮೇಲ್ವರ್ಗದ ವಿವಿಧ ರಾಜಕೀಯ ಪಕ್ಷಗಳಿಗೆ ಮತ ನೀಡಿದ್ದು, ಸಾಕು ಈ ಬಾರಿಯಾದರೂ ಅವರು ತಮ್ಮದೇ ಪಕ್ಷವಾದ ಬಹುಜನ ಸಮಾಜ ಪಕ್ಷಕ್ಕೆ ಮತ ಹಾಕುವ ಮೂಲಕ ಆ ಸಮುದಾಯದ ಜನ ಅಧಿಕಾರಕ್ಕೆ ಬರಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕೆಳ ವರ್ಗದವರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಂದ ಎಲ್ಲೆಡೆ ಈ ಬಾರಿ ಬಹುಜನ ಸಮಾಜ ಪಕ್ಷಕ್ಕೆ ಉತ್ತಮ ಸ್ಪಂದನೆ ಮತ್ತು ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಸ್ಪಿ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.
ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಗಂಗಾಧರ್, ಅಸೆಂಬ್ಳಿ ಸಂಯೋಜಕಿ ಕೆ.ಎಸ್. ಮಂಜುಳಾ, ಪಕ್ಷದ ಮುಖಂಡರಾದ ರತ್ನ, ವಸಂತ, ವಿಜಯಕುಮಾರ್, ಗಿರೀಶ್, ಅನ್ನಪೂರ್ಣ ಹಾಜರಿದ್ದರು.










