ಭೋಪಾಲ್: ಜಮೀನು ವಿವಾದದ ಗಲಾಟೆಯಲ್ಲಿ ಒಂದೇ ಕುಟುಂಬದ ಆರು ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಇಂದು ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ.
ಘಟನೆಯ ಆಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವೀಡಿಯೊದಲ್ಲಿ ಇಬ್ಬರು ರೈಫಲ್‍ಗಳನ್ನು ಹಿಡಿದು ಇನ್ನೊಂದು ಗುಂಪಿನ ಕಡೆ ಗುಂಡು ಹಾರಿಸುವುದು ದಾಖಲಾಗಿದೆ. ನಂತರ ಕೆಲವರು ಅವರನ್ನು ಕೋಲುಗಳಿಂದ ಥಳಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಧೀರ್ ಸಿಂಗ್ ತೋಮರ್ ಮತ್ತು ಗಜೇಂದ್ರ ಸಿಂಗ್ ತೋಮರ್ ಕುಟುಂಬಗಳ ನಡುವೆ 2013ರಲ್ಲಿ ತ್ಯಾಜ್ಯ ಸುರಿಯುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳವಾಗಿತ್ತು. ಆಗ ಧೀರ್ ಸಿಂಗ್ ತೋಮರ್ ಕುಟುಂಬದ ಇಬ್ಬರು ಸಾವನ್ನಪ್ಪಿದ್ದರು. ಈ ವೇಳೆ ಗಜೇಂದ್ರ ಸಿಂಗ್ ತೋಮರ್ ಕುಟುಂಬವು ಗ್ರಾಮದಿಂದ ಪಲಾಯನ ಮಾಡಿತ್ತು.
ಎರಡು ಕುಟುಂಬಗಳು ನ್ಯಾಯಾಲಯದ ಹೊರಗೆ ರಾಜಿ ಮಾಡಿಕೊಂಡಿದ್ದವು. ಇಂದು ಗಜೇಂದ್ರ ಸಿಂಗ್ ತೋಮರ್ ಕುಟುಂಬ ಗ್ರಾಮಕ್ಕೆ ಮರಳಿದೆ. ಧೀರ್ ಸಿಂಗ್ ತೋಮರ್ ಅವರ ಕುಟುಂಬವು ಪೂರ್ವಯೋಜಿತ ದಾಳಿ ನಡೆಸಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಹತ್ಯೆಯಲ್ಲಿ ಭಾಗಿಯಾಗಿರುವ ಎಂಟು ಮಂದಿಯನ್ನು ಗುರುತಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.










