ಭಯೋತ್ಪಾದಕರಿಂದ ಸ್ಫೋಟ – ಇಬ್ಬರು ಸೇನಾ ಸಿಬ್ಬಂದಿಗಳು ಹುತಾತ್ಮ…

36
firstsuddi

ಜಮ್ಮು ಮತ್ತು ಕಾಶ್ಮೀರ: ರಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ಸ್ಫೋಟದಲ್ಲಿ ವಿಶೇಷ ಪಡೆಗಳಿಗೆ ಸೇರಿದ ಇಬ್ಬರು ಸೇನಾ ಸಿಬ್ಬಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸೇನೆಯ ಉತ್ತರ ಕಮಾಂಡ್‌ನ ಹೇಳಿಕೆಯ ಪ್ರಕಾರ, ಕಳೆದ ತಿಂಗಳು ಜಮ್ಮು ಪ್ರದೇಶದ ಭಾಟಾ ಧುರಿಯನ್‌ನ ತೋಟಾ ಗಲಿ ಪ್ರದೇಶದಲ್ಲಿ ಸೇನಾ ಟ್ರಕ್‌ನ ಮೇಲೆ ನಡೆಸಿದ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರ ಗುಂಪನ್ನು ಪತ್ತೆಹಚ್ಚಲು ಪಟ್ಟುಬಿಡದ ಸೇನಾ ಸಿಬ್ಬಂದಿ ಗುಪ್ತಚರ ಆಧಾರಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.

ರಜೌರಿ ಸೆಕ್ಟರ್‌ನ ಕಂಡಿ ಅರಣ್ಯದ ದಟ್ಟವಾದ ಪೊದೆಗಳಲ್ಲಿ ಮತ್ತು ಕಲ್ಲಿನ ಭೂಪ್ರದೇಶದ ಗುಹೆಯಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಆಧರಿಸಿ, ನಿನ್ನೆ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಇಂದು ಬೆಳಿಗ್ಗೆ 7:30ರ ಸುಮಾರಿಗೆ ಶೋಧ ತಂಡವು ಭಯೋತ್ಪಾದಕರ ಸಂಪರ್ಕ ಎಲ್ಲಿದೆ ಎಂದು ಪತ್ತೆ ಮಾಡಿದ್ದಾರೆ.

ಭಯೋತ್ಪಾದಕರು ಪ್ರತೀಕಾರವಾಗಿ ಸ್ಫೋಟಕ ಸಾಧನವನ್ನು ಎಸೆದರು. ಈ ವೇಳೆ ಸೇನಾ ತಂಡದಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದಾರೆ, ಓರ್ವ ಉನ್ನತ ಅಧಿಕಾರಿ ಸೇರಿದಂತೆ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ಚಿಕಿತ್ಸೆಗಾಗಿ ಉಧಂಪುರದ ಕಮಾಂಡ್ ಆಸ್ಪತ್ರೆಗೆ ವಿಮಾನದ ಮೂಲಕ ರವಾನಿಸಲಾಗಿದ್ದು, ಎನ್‌ಕೌಂಟರ್ ನಡೆದ ಸ್ಥಳಕ್ಕೆ ಸುತ್ತಮುತ್ತಲಿನ ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.