ನವದೆಹಲಿ: ಕುಖ್ಯಾತ ಗ್ಯಾಂಗ್‌ಸ್ಟರ್ ತಿಲ್ಲು ತಾಜ್‌ಪುರಿಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ವಿಶೇಷ ಪೊಲೀಸ್ (ಟಿಎನ್‌ಎಸ್‌ಪಿ)ನ ಏಳು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಈ ಹಿಂದೆ ದೆಹಲಿ ತಿಹಾರ್ ಜೈಲಿನಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್ ತಿಲ್ಲು ತಾಜ್‌ಪುರಿಯಾನನ್ನು ಇರಿದು ಕೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸ್ ಡಿಜಿಪಿ ಅಂದು ತಿಹಾರ್ ಜೈಲಿನಲ್ಲಿ ಕರ್ತವ್ಯ ನಿಯೋಜನೆಯಾಗಿದ್ದ 7 ಮಂದಿ ತಮಿಳುನಾಡು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಅವರನ್ನು ತಮಿಳುನಾಡಿಗೆ ವಾಪಸ್ ಕಳುಹಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ತಿಲ್ಲು ತಾಜ್‌ಪುರಿಯಾ ಹತ್ಯೆ ಬಳಿಕ ದೆಹಲಿ ಕಾರಾಗೃಹಗಳ ಮಹಾನಿರ್ದೇಶಕ ಸಂಜಯ್ ಬೇನಿವಾಲ್ ತನ್ನ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಪೊಲೀಸರಿಗೆ ಪತ್ರ ಬರೆದಿದ್ದರು. ಅದರಂತೆ ತಮ್ಮ ಸಿಬ್ಬಂದಿಯ ಆಪಾದಿತ ನಿರ್ಲಕ್ಷ್ಯದ ಬಗ್ಗೆ ಟಿಎನ್‌ಎಸ್‌ಪಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಿಲ್ಲು ತಾಜ್‌ಪುರಿಯಾ ಯಾರು?
2021ರಲ್ಲಿ ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ಸ್ಟರ್ ಜಿತೇಂದರ್ ಗೋಗಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಗುಂಡು ಹಾರಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಪ್ರತಿದಾಳಿ ನಡೆಸಿ ಕೊಂದಿದ್ದರು. ಈ ಪ್ರಕರಣದಲ್ಲಿ ಗುಂಡು ಹಾರಿಸುವಂತೆ ಸೂಚನೆ ನೀಡಿದ್ದ ತಾಜ್‌ಪುರಿಯಾ ಪ್ರಮುಖ ಆರೋಪಿಯಾಗಿದ್ದು, ಜೈಲು ಸೇರಿದ್ದನು.










