ಕೊಡಗು: ಗುಂಡೇಟಿಗೆ ಬಲಿಯಾದ 10 ತಿಂಗಳ ಗರ್ಭಿಣಿ ಕಾಡಾನೆ…

67
firstsuddi

ಕೊಡಗು: ಹಸಿವು ನೀಗಿಸಿಕೊಳ್ಳಲು ನಾಡಿಗೆ ಬಂದ 10 ತಿಂಗಳ ಗರ್ಭಿಣಿ ಹೆಣ್ಣಾನೆಯೊಂದನ್ನು ಕಿಡಿಗೇಡಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕುಶಾಲನಗರ ತಾಲೂಕಿನ ರಸೂಲ್ ಪುರ ಬಾಳುಗೋಡಿನಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಅಂದಾಜು 20 ವರ್ಷದ ಆನೆಯನ್ನು ಶೂಟ್ ಮಾಡಿ ಹತ್ಯೆ ಮಾಡಲಾಗಿದ್ದು, ಸ್ಥಳದಲ್ಲೇ ಒದ್ದಾಡಿ ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ವೇಳೆ, ಆನೆ 10 ತಿಂಗಳ ಗರ್ಭಿಣಿಯಾಗಿದ್ದು, ಗರ್ಭದಲ್ಲಿದ್ದ ಮರಿಯಾನೆ ಕೂಡ ಸಾವನ್ನಪ್ಪಿದೆ ಎಂಬುದು ತಿಳಿದು ಬಂದಿದೆ.

ರಸೂಲ್ ಪುರ, ಬಾಳುಗೋಡು ಹಾಗೆ ದುಬಾರೆ ಭಾಗದಲ್ಲಿ ಕಾಡಾನೆಗಳ ಕಾಟ ಹೊಸದೇನು ಅಲ್ಲ. ಆ ಭಾಗದಲ್ಲೆಲ್ಲಾ ಸಾಕಷ್ಟು ಅರಣ್ಯ ಪ್ರದೇಶ ಇರುವುದರಿಂದ ಅಲ್ಲಿರುವ ಆನೆಗಳು ಪ್ರತೀ ರಾತ್ರಿ ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದೇ ಬರುತ್ತವೆ. ಇದಕ್ಕಾಗಿ ರೈತರು, ಅರಣ್ಯ ಇಲಾಖೆ ಕಾಡಿನ ಅಂಚಿನಲ್ಲಿ ಸೋಲಾರ್ ವಿದ್ಯುತ್ ಬೇಲಿಯನ್ನು ನಿರ್ಮಿಸಿದ್ದರು. ಆದರೆ ಇವುಗಳು ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಆನೆಗಳು ಸುಲಭವಾಗಿ ರೈತರ ತೋಟ, ಗದ್ದೆಗಳಿಗೆ ನುಗ್ಗುತ್ತಿದ್ದವು. ಹಾಗಾಗಿಯೇ, ರಾತ್ರಿ ಕಾಫಿ ತೋಟಕ್ಕೆ ನುಗ್ಗಿದ್ದ ಆನೆಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಆನೆ ಬಲಿಯಾಗಿರುವ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.