ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಮತ್ತು ಯುಎಇಗೆ ಮೂರು ದಿನ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ಪ್ಯಾರಿಸ್ಗೆ ಪ್ರಧಾನಿ ತೆರಳಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಮೋದಿ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ನಾಳೆ ನಡೆಯಲಿರುವ ಬಾಸ್ಟಿಲ್ ಡೇ ಪರೇಡ್ನಲ್ಲಿ ಮೋದಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದು, ಈ ಪರೇಡ್ನಲ್ಲಿ 269 ಸದಸ್ಯರ ಭಾರತೀಯ ತ್ರಿ-ಸೇವಾ ತುಕಡಿ ಭಾಗವಹಿಸಲಿದೆ.
ಈ ಸಂದರ್ಭ ಫ್ರೆಂಚ್ ಜೆಟ್ಗಳೊಂದಿಗೆ ಭಾರತೀಯ ವಾಯುಪಡೆಯ ಮೂರು ರಫೇಲ್ ಫೈಟರ್ ಜೆಟ್ಗಳು ಸೇರಿಕೊಳ್ಳಲಿವೆ. ಅಲ್ಲದೇ ರಕ್ಷಣೆ, ಬಾಹ್ಯಾಕಾಶ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದೆ ಕೊಂಡೊಯ್ಯಲು ಪ್ರಧಾನಿ ಮೋದಿ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಫ್ರೆಂಚ್ ಅಧ್ಯಕ್ಷರು ಭಾರತದ ಪ್ರಧಾನಿಗೆ ಗೌರವಾರ್ಥವಾಗಿ ಅಧಿಕೃತ ಔತಣಕೂಟ ಮತ್ತು ಖಾಸಗಿ ಭೋಜನ ಕೂಟವನ್ನೂ ಆಯೋಜಿಸಿದ್ದಾರೆ.
ಫ್ರಾನ್ಸ್ ಪ್ರವಾಸದ ಬಳಿಕ ಪ್ರಧಾನಿ ಮೋದಿ ಅಬುಧಾಬಿಗೆ ಪ್ರಯಾಣಿಸಲಿದ್ದು, ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಹೆಚ್ಹೆಚ್ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವರು.










