5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪಾಪಿ…

67
firstsuddi

ತಿರುವನಂತಪುರಂ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದಿದೆ.

ದುಷ್ಕೃತ್ಯ ನಡೆಸಿದ ಆರೋಪಿಯನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದು, ಕುಡಿದ ಅಮಲಿನಲ್ಲಿದ್ದರಿಂದ ಆತನಿಂದ ಸಂಪೂರ್ಣ ಮಾಹಿತಿ ಪಡೆಯಲು ಕೆಲವು ಗಂಟೆಗಳೇ ಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಅಸ್ಫಾಕ್ ಅಸ್ಲಾಮ್ ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ದಂಪತಿಯ 5 ವರ್ಷದ ಮಗಳು ಶುಕ್ರವಾರ ಸಂಜೆ ನಾಪತ್ತೆಯಾಗಿದ್ದು, ಆರೋಪಿ ಆಕೆಯನ್ನು ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಆದ್ದರಿಂದ ಆತನನ್ನು ಅದೇ ದಿನ ರಾತ್ರಿ 9:30ಕ್ಕೆ ವಶಕ್ಕೆ ಪಡೆದೆವು. ಮದ್ಯಪಾನ ಮಾಡಿದ್ದರಿಂದ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಸ್ಥಿತಿಯಲ್ಲಿ ಆತ ಇರಲಿಲ್ಲ ಎಂದು ಎರ್ನಾಕುಲಂ ಎಸ್‍ಪಿ ವಿವೇಕ್ ಕುಮಾರ್ ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಬಾಲಕಿಯನ್ನು ಕೊಂದು ಹೂತುಹಾಕಿದ ಜಾಗವನ್ನು ತೋರಿಸಿದ್ದಾನೆ. ಆರೋಪಿ ಇತ್ತೀಚಿಗೆ ಬಾಲಕಿ ಮತ್ತು ಆಕೆಯ ಕುಟುಂಬ ವಾಸಿಸುತ್ತಿದ್ದ ಕಟ್ಟಡಕ್ಕೆ ತೆರಳಿದ್ದ. ಬಳಿಕ ಆಕೆಯನ್ನು ಅಲ್ಲಿಂದ ಬೇರೆಡೆಗೆ ಕರೆದೊಯ್ದು ಲೈಂಗಿಕ ತೃಷೆ ತೀರಿಸಿಕೊಂಡ ಬಳಿಕ ಆಕೆಯ ಕತ್ತು ಹಿಸುಕಿ ಕೊಂದು ಆಕೆಯ ಮೃತದೇಹ ಯಾರಿಗೂ ಕಾಣದ ರೀತಿಯಲ್ಲಿ ಮುಚ್ಚಲು ಕಸಗಳು ಮತ್ತು ಗೋಣಿ ಚೀಲಗಳನ್ನು ಬಳಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಾಲಕಿ ನಾಪತ್ತೆಯಾದ ಬಳಿಕ ಆಕೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಇದನ್ನು ನೋಡಿದ್ದ ವ್ಯಕ್ತಿಯೋರ್ವರು ಮಾರುಕಟ್ಟೆ ಪ್ರದೇಶದಲ್ಲಿ ಆರೋಪಿ ಜೊತೆ ಬಾಲಕಿ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲದೇ, ಮಗುವಿನ ಬಗ್ಗೆ ಆರೋಪಿ ಬಳಿ ವಿಚಾರಿಸಿದ್ದಾರೆ. ಈ ವೇಳೆ ಆರೋಪಿ ಈಕೆ ತನ್ನ ಮಗಳು ಎಂದು ತಿಳಿಸಿದ್ದಲ್ಲದೇ, ಮದ್ಯಪಾನ ಮಾಡುವ ಸಲುವಾಗಿ ಮಾರುಕಟ್ಟೆಯ ಹಿಂಬದಿಗೆ ಹೋಗಿದ್ದಾನೆ. ಅಲ್ಲದೇ ಬಾಲಕಿಯ ಕೈಯಲ್ಲಿ ಮಿಠಾಯಿ ಇತ್ತು ಎಂದು ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯ ಆಧಾರದ ಮೇರೆಗೆ ಪೊಲೀಸರು ಮಾರುಕಟ್ಟೆಯ ಹಿಂಭಾಗದಲ್ಲಿ ಶೋಧಕಾರ್ಯವನ್ನು ನಡೆಸಿದ್ದಾರೆ.

ಘಟನೆಯ ಬಳಿಕ ಬಾಲಕಿಯ ಮೃತದೇಹವನ್ನು ಆಕೆ ಓದುತ್ತಿದ್ದ ಶಾಲೆಯಲ್ಲಿ ಇರಿಸಲಾಗಿದ್ದು, ನೂರಾರು ಮಂದಿ ಅಂತಿಮ ನಮನ ಸಲ್ಲಿಸಿ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿದರು.