ಕರ್ನಾಟಕದ ಹೆಮ್ಮೆಯ ಪ್ರತೀಕ ನಂದಿನಿ ಹಾಲು ಉತ್ಪನ್ನಗಳಿಗೆ ರಾಯಭಾರಿಯಾಗಿ ಸ್ಯಾಂಡಲ್ ವುಡ್ ನ ಹೆಸರಾಂತ ನಟ ಶಿವರಾಜ್ಕುಮಾರ್ ಆಯ್ಕೆಯಾಗಿದ್ದಾರೆ.
ಇಂದು ಶಿವರಾಜ್ ಕುಮಾರ್ ಜೊತೆ ಕೆಎಂಎಫ್ ಅಧಿಕಾರಿಗಳು ಮಾತುಕತೆ ನಡೆಸಿ, ಶಿವರಾಜ್ಕುಮಾರ್ ಅವರನ್ನು ಒಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ್ ಅವರು ಡಾ. ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ.
ಶಿವರಾಜ್ಕುಮಾರ್ ಅವರು ಹತ್ತಕ್ಕೂ ಅಧಿಕ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ತಮಿಳು ಚಿತ್ರಗಳನ್ನು ಒಪ್ಪಿಕೊಂಡಿರುವುದರಿಂದ ಅವರು ಬೇರೆ ರಾಜ್ಯಗಳಿಗೂ ತೆರಳಬೇಕಾಗುತ್ತದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ‘ಜೈಲರ್’ ಚಿತ್ರದ ಆಡಿಯೋ ಲಾಂಚ್ನಲ್ಲಿ ಅವರು ಭಾಗಿ ಆಗಿದ್ದರು. ಇಷ್ಟೆಲ್ಲ ಕೆಲಸಗಳ ಮಧ್ಯೆ ಅವರು ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ ಮುಂದಾಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಈ ಮೊದಲು ರಾಜ್ಕುಮಾರ್ ಅವರು ಕೂಡ ನಂದಿನಿ ಉತ್ಪನ್ನದ ರಾಯಭಾರಿ ಆಗಿದ್ದರು. ಅವರು ಪ್ರಚಾರಕ್ಕೆ ಯಾವುದೇ ಸಂಭಾವನೆ ಪಡೆದಿರಲಿಲ್ಲ. ಇದಾದ ನಂತರ ಪುನೀತ್ ರಾಜ್ ಕುಮಾರ್ ಅವರು ಕೂಡ ನಂದಿನಿ ಬ್ರ್ಯಾಂಡ್‌ಗೆ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಇದಕ್ಕಾಗಿ ಅವರು ಯಾವುದೇ ಸಂಭಾವನೆ ಪಡೆದಿರಲಿಲ್ಲ ಎಂಬ ಸುದ್ದಿ ಅವರ ಸಾವಿನ ಬಳಿಕ ಕೇಳಿ ಬಂದಿತ್ತು. ಈಗ ಕೆಎಂಎಫ್ ಮನವಿ ಮೇರೆಗೆ ರಾಜ್ಕುಮಾರ್ ಕುಟುಂಬದ ಶಿವರಾಜ್ಕುಮಾರ್ ನಂದಿನಿ ಉತ್ಪನ್ನಗಳಿಗೆ ರಾಯಭಾರಿ ಆಗಲು ಒಪ್ಪಿಕೊಂಡಿದ್ದಾರೆ.










