ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ನೇಣಿಗೆ ಶರಣು…

74
firstsuddi

ಬಾಲಿವುಡ್​ನ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಅವರು ಇಂದು ಮುಂಜಾನೆ ನೇಣಿಗೆ ಶರಣಾಗಿದ್ದಾರೆ. ಮುಂಬೈನ ಕರ್ಜತ್ ನಲ್ಲಿರುವ ತಮ್ಮ ಒಡೆತನದ ಎನ್​ಡಿ ಸ್ಟುಡಿಯೋಸ್​ನಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಗಸ್ಟ್ 9ಕ್ಕೆ ಅವರು 58ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಅಷ್ಟರಲ್ಲಿ ಇಂಥದ್ದೊಂದು ತಪ್ಪು ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ, ಎನ್ನುತ್ತಾರೆ ದೇಸಾಯಿ ಆಪ್ತರು. ಕಲಾ ನಿರ್ದೇಶನಕ್ಕಾಗಿಯೇ ಅವರು 4 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಅವರು ನಿರ್ಮಾಣ ಮಾಡುತ್ತಿದ್ದ ಅದ್ದೂರಿ ಸೆಟ್​​ಗಳನ್ನು ನೋಡಿ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದರು. ಹಲವು ಸಿನಿಮಾ ಯಶಸ್ಸಿಗೆ ಇವರು ಹಾಕುತ್ತಿದ್ದ ಸೆಟ್​ಗಳು ಕೂಡ ಕಾರಣ ಆಗಿದ್ದವು.

‘ಹಮ್ ದಿಲ್ ದೇ ಚುಕೆ ಸನಮ್’, ‘ದೇವದಾಸ್’, ‘ಜೋಧಾ ಅಕ್ಬರ್’ ಹಾಗೂ ‘ಲಗಾನ್’ ಮೊದಲಾದ ಸಿನಿಮಾಗಳಿಗೆ ನಿತಿನ್ ಅವರು ಸೆಟ್ ನಿರ್ಮಾಣ ಮಾಡಿದ್ದರು. ವಿಧು ವಿನೋದ್ ಚೋಪ್ರಾ ನಿರ್ದೇಶನದ ‘1942: ಎ ಲವ್ ಸ್ಟೋರಿ’ ಸಿನಿಮಾದ ಸೆಟ್ ಸಾಕಷ್ಟು ಗಮನ ಸೆಳೆದಿತ್ತು. ಸಂಜಯ್ ಲೀಲಾ ಬನ್ಸಾಲಿ, ವಿಧು ವಿನೋದ್ ಚೋಪ್ರಾ, ರಾಜ್​ಕುಮಾರ್ ಹಿರಾನಿ ಮೊದಲಾದ ಖ್ಯಾತ ನಾಮರ ಜೊತೆ ನಿತಿನ್ ಕೆಲಸ ಮಾಡಿದ್ದರು.

ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಆರ್ಥಿಕ ಸಂಕಷ್ಟವೇ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ನಿತಿನ್ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ.