ಸ್ಪಂದನಾ ವಿಜಯ್ ರಾಘವೇಂದ್ರ ನಿಧನಕ್ಕೆ ಸಿಎಂ, ಡಿಸಿಎಂ ಸೇರಿ ಹಲವು ಗಣ್ಯರಿಂದ ಸಂತಾಪ…

75
firstsuddi

ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ‘ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಮೃತರ ಆತ್ಮಕ್ಕೆ ಆ ದೇವರು ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ. ವಿಜಯ ರಾಘವೇಂದ್ರ ಮತ್ತು ಬಿ.ಕೆ. ಶಿವರಾಮ್ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ’ ಎಂದಿದ್ದಾರೆ.

ಸ್ಪಂದನ ನಿಧನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ತೀರಾ ಇತ್ತೀಚೆಗಷ್ಟೆ ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ನನ್ನನ್ನು ಭೇಟಿ ಮಾಡಿದ್ದರು. ಈಗ ಅವರು ಇಲ್ಲ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಅವರದ್ದು ಸಾಯುವ ವಯಸ್ಸಲ್ಲ. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಮನುಷ್ಯನ ಜೀವನ ಎಷ್ಟು ಅನಿಶ್ಚಿತ ಎಂಬುದಕ್ಕೆ ಈ ಅಗಲಿಕೆಯೂ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ವಿಜಯ ರಾಘವೇಂದ್ರ ಚಿತ್ರಗಳ ನಿರ್ದೇಶಕ ಹಾಗೂ ಅವರ ಪುತ್ರನಿಗೆ ನೃತ್ಯ ಹೇಳಿಕೊಡುತ್ತಿರುವ ಹಿರಿಯ ನಿರ್ದೇಶಕ ನಾಗಭರಣ ಮಾಧ್ಯಮಗಳ ಜೊತೆ ಮಾತನಾಡಿ, ‘ನೀವು ಆ ಸುದ್ದಿ ಹೇಳಿದ ತಕ್ಷಣ ನಾನು ಗೌರವ ಡಾಕ್ಟರೇಟ್ ಪಡೆದ ಸಂತೋಷ 100 ಪಟ್ಟು ಕುಸಿಯಿತು. ವಿಜಯರಾಘವೇಂದ್ರ ಕುಟುಂಬದ ಜೊತೆ ಬಹಳ ದೊಡ್ಡ ಒಡನಾಟ ಇತ್ತು. ಚಿನ್ನಾರಿ ಮುತ್ತ ಸಿನೆಮಾದಿಂದ ವಿಜಯ ರಾಘವೇಂದ್ರ ಬೆಳವಣಿಗೆ ಕಂಡವನು. ನನ್ನ ಚಿನ್ನಾರಿಮುತ್ತವನ್ನು ಅವನಲ್ಲಿ ಕಂಡಿದ್ದೆ. ಆ ಸುದ್ದಿ ಕೇಳಿ ನನಗೆ ನಿಜವಾಗಿಯೂ ಶಾಕ್ ಆಗಿದೆ’ ಎಂದು ತಮಕೂರಿನಿಂದ ಮಾತನಾಡಿದ್ದಾರೆ.

“ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾದ ಸುದ್ದಿ ಕೇಳಿ ಆಘಾತವಾಗಿದೆ. ಅತಿ ಸಣ್ಣವಯಸ್ಸಿಗೆ ಆಗುವ ಹೃದಯಾಘಾತದ ದುರ್ಘಟನೆಗಳು ನನ್ನ ಮನಸ್ಸನ್ನು ವಿಚಲಿತಗೊಳಿಸಿದೆ. ಸ್ಪಂದನಾ ಅವರ ಸಾವು ಅನಿರೀಕ್ಷಿತ. ವಿಜಯ್ ರಾಘವೇಂದ್ರ ಕುಟುಂಬದ ಶೋಕದಲ್ಲಿ ನಾನೂ ಭಾಗಿ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.