ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ. ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಅವರ ದೇಹವನ್ನು ಕುಟುಂಬಸ್ಥರು ವಿಮಾನದಲ್ಲಿ ಕರೆತಂದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ವಿಜಯ್ ರಾಘವೇಂದ್ರ ಅವರು ಮೌನವಾಗಿ ಪಾರ್ಥಿವ ಶರೀರದ ಎದುರು ನಿಂತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸ್ಪಂದನಾ ತಂದೆ ಶಿವರಾಂ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಣ್ಣೀರ ಕಡಲಲ್ಲಿ ಇರೋ ಅಣ್ಣ ವಿಜಯ್ಗೆ ಶ್ರೀಮುರಳಿ ಸಂತೈಸುತ್ತಿದ್ದಾರೆ.
ಮಗ ಶೌರ್ಯನಿಗೆ ತಂದೆ ಮತ್ತು ಚಿಕ್ಕಪ್ಪ ಶ್ರೀಮುರಳಿ ಸಂತೈಸುತ್ತಿದ್ದಾರೆ. ಸ್ಪಂದನಾ ಇಲ್ಲದೇ ವಿಜಯ ಮುಂದೆ ಬದುಕಿನ ಹೇಗೆ ಎಂಬ ಪ್ರಶ್ನೆ ಎಲ್ಲರಿಗೂ ಮೂಡಿದೆ.
ವಿಧಾನಸಭೆ ಸಭಾಪತಿ ಯು.ಟಿ. ಖಾದರ್, ಸಚಿವ ಪ್ರಿಯಾಂಕ್ ಖರ್ಗೆ, ವಿಕ್ರಮ್ ಸೂರಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಸೇರಿದಂತೆ ರಾಜ್ ಕುಟುಂಬದ ಅನೇಕರು, ನಟಿ ಅನುಶ್ರೀ, ಹಿರಿಯ ನಟಿ ಉಮಾಶ್ರೀ, ನಟಿ ಸುಧಾರಾಣಿ ಕುಟುಂಬ, ಗಾಯಕ ವಿಜಯ ಪ್ರಕಾಶ್, ರಾಘವೇಂದ್ರ ರಾಜ್ಕುಮಾರ್, ನಟ ಕೋಮಲ್, ಹಿರಿಯ ನಟ ಶ್ರೀನಾಥ್, ಹಿರಿಯ ನಟಿ ಗಿರಿಜಾ ಲೋಕೇಶ್ ಅಂತಿಮ ದರ್ಶನ ಪಡೆದರು. ಸಚಿವ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ, ಶಾಸಕ ಸುನೀಲ್ ಕುಮಾರ್, ಹರತಾಳು ಹಾಲಪ್ಪ, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಹಾಗೂ ಇತರೆ ಗಣ್ಯರು, ನಟ-ನಟಿಯರು, ಕುಟುಂಬಸ್ಥರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಅಂತಿಮ ದರ್ಶನಕ್ಕೆ ಬಂದವರು ವಿಜಯ ರಾಘವೇಂದ್ರ ಅವರನ್ನು ಸಂತೈಸುವ ಕೆಲಸ ಮಾಡುತ್ತಿದ್ದಾರೆ.
ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರ ಘಾಟ್ ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.










