ಪಂಚಭೂತಗಳಲ್ಲಿ ಸ್ಪಂದನಾ ಲೀನ- ಪತಿ, ಪುತ್ರನಿಂದ ಕಣ್ಣೀರಿನ ವಿದಾಯ…

59
firstsuddi

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಅಂತ್ಯಕ್ರಿಯೆ ಇಂದು ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿತು. ವಿಜಯ ರಾಘವೇಂದ್ರ, ಪುತ್ರ ಶೌರ್ಯ ಸೇರಿದಂತೆ ಕುಟುಂಬಸ್ಥರು, ಹಲವು ಗಣ್ಯರು ಸ್ಪಂದನಾಗೆ ಕಣ್ಣೀರಿನ ವಿದಾಯ ಹೇಳಿದರು.

ಈಡಿಗ ಪದ್ಧತಿಯಂತೆ ಸ್ಪಂದನಾ ಅವರ ಅಂತ್ಯಕ್ರಿಯೆ ಮಾಡಲಾಯಿತು. ನಟ ವಿಜಯ್ ರಾಘವೇಂದ್ರ ಹಾಗೂ ಅವರ ಪುತ್ರ ಶೌರ್ಯ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.

ಸ್ಪಂದನಾ ಮೃತ ದೇಹಕ್ಕೆ ಮದುವೆಯಲ್ಲಿ ಉಟ್ಟಿದ್ದ ಸೀರೆಯನ್ನು ಉಡಿಸಲಾಗಿತ್ತು. ಸ್ಪಂದನಾ ಮೃತದೇಹಕ್ಕೆ ಸಂಪ್ರದಾಯಬದ್ಧವಾಗಿ ವಿಧಿ ವಿಧಾನಗಳನ್ನು ಮಾಡಿದ ನಂತರದಲ್ಲಿ, ವಿಶೇಷವಾಗಿ ತಯಾರಾದ ವಾಹನದಲ್ಲಿ ಮಲ್ಲೇಶ್ವರಂನಿಂದ ಹರಿಶ್ಚಂದ್ರಘಾಟ್​ವರೆಗೆ ಸ್ಪಂದನಾ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಅಂತಿಮಯಾತ್ರೆಯ ವೇಳೆ ರಸ್ತೆಯುದ್ದಕ್ಕೂ ನೂರಾರು ಜನ ಸ್ಪಂದನಾ ಅವರ ಅಂತಿಮದರ್ಶನ ಪಡೆದರು.

ಸ್ನೇಹಿತರ ಜೊತೆಗೆ ಸ್ಪಂದನಾ ಅವರು ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿದ್ದರು. ಆ ವೇಳೆ ಅವರಿಗೆ ಹೃದಯಾಘಾತ ಆಗಿ ನಿಧನರಾಗಿದ್ದಾರೆ. ನಿನ್ನೆ ತಡರಾತ್ರಿ ಸ್ಪಂದನಾ ಅವರ ಮೃತದೇಹ ಥಾಯ್ಲೆಂಡ್‌ನಿಂದ ಬೆಂಗಳೂರಿಗೆ ಆಗಮಿಸಿತ್ತು. ಬೆಳಗ್ಗಿನ ಜಾವ 6 ಗಂಟೆಯಿಂದ ಮಧ್ಯಾಹ್ನ 1.45 ವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ವೇಳೆ ಕನ್ನಡ ಚಿತ್ರರಂಗದ ಗಣ್ಯರು, ಸಾಮಾನ್ಯ ಜನರು, ರಾಜಕಾರಣಿಗಳು, ಕುಟುಂಬಸ್ಥರು, ಸ್ನೇಹಿತರು ಸ್ಪಂದನಾ ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ.