ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅಗಲಿಕೆ ಹಿನ್ನೆಲೆ ಇಂದು ಉತ್ತರ ಕ್ರಿಯೆಗಳು ನಡೆಯುತ್ತಿದೆ. ಬೆಂಗಳೂರಿನ ಮಲ್ಲೇಶ್ವರಂನ ಬಿಬಿಎಂಪಿ ಆಟದ ಮೈದಾನದಲ್ಲಿ ಸರ್ವರಿಗೂ ಭೋಜನ ವ್ಯವಸ್ಥೆ ಮಾಡಲಾಗಿದೆ.
ಉತ್ತರಕ್ರಿಯೆ ಇಂದು ಬೆಳಿಗ್ಗೆ 8:30ರಿಂದ ಸ್ಪಂದನಾ ಸ್ವಗೃಹದಲ್ಲಿ ಶಾಂತಿ ಹೋಮ ನಡೆಯುತ್ತಿದೆ. ಬಳಿಕ 12 ಗಂಟೆ ನಂತರ ಕೋದಂಡರಾಮಪುರದ ಯಂಗ್ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನ ಆರಂಭವಾಗಲಿದೆ. ಮನೆಮಗಳು ಸ್ಪಂದನಾ ಆತ್ಮಕ್ಕೆ ಚಿರಶಾಂತಿ ಕೋರಲು ಸರ್ವರಿಗೂ ಭಾಗಿಯಾಗುವಂತೆ ಸ್ಪಂದನಾ ಅವರ ತಂದೆ ಬಿ.ಕೆ ಶಿವರಾಂ ಮತ್ತು ವಿಜಯ್ ರಾಘವೇಂದ್ರ ಅವರ ತಂದೆ ಎಸ್.ಎ ಚಿನ್ನೆಗೌಡರು ಮತ್ತು ಕುಟುಂಬಸ್ಥರು ಸರ್ವರಿಗೂ ಆಹ್ವಾನ ನೀಡಿದ್ದರು.
ಸುಮಾರು 4000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ವಿಐಪಿ- ಸಾರ್ವಜನಿಕರಿಗೆ ಬೇರೆ ಬೇರೆ ಊಟದ ವ್ಯವಸ್ಥೆ ಮಾಡಲಾಗಿದೆ. 80ಕ್ಕೂ ಹೆಚ್ಚು ಅಡುಗೆಯವರಿಂದ ಭೋಜನ ತಯಾರಿ ಮಾಡಿಸಿದ್ದಾರೆ. ಬರುವ ಗೆಸ್ಟ್ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಿದ್ದು, ಪೊಲೀಸ್ ಸಿಬ್ಬಂದಿಗಳು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಭೋಜನಕ್ಕೆ ಉಪ್ಪಿಟ್ಟು, ಪಲಾವ್, ಲಡ್ಡು, ಮಸಾಲಾ ವಡೆ, ಉದ್ದಿನ ವಡೆ, ಕೊಸಂಬರಿ, ಅನ್ನದ ಜೊತೆ ತರಕಾರಿ ಸಾರು ಮತ್ತು ತಿಳಿಸಾರು ಹಾಗೂ ಪಾಯಸ, ಮೊಸರು, ಹಪ್ಪಳ ಸೇರಿದಂತೆ 21 ಬಗೆಯ ವಿವಿಧ ಖಾದ್ಯಗಳ ತಯಾರಿ ಮಾಡಲಾಗಿದೆ.
ಸ್ನೇಹಿತರ ಜೊತೆಗೆ ಸ್ಪಂದನಾ ಬ್ಯಾಕಾಂಕ್ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿ ಬ್ಯಾಂಕಾಕ್ನಲ್ಲೇ ಕೊನೆಯುಸಿರೆಳೆದಿದ್ದಾರೆ. ಆಗಸ್ಟ್ 9ರಂದು ಹರಿಶ್ಚಂದ್ರಘಾಟ್ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ಮಾಡಲಾಗಿದೆ. ಆಗಸ್ಟ್ 11ರಂದು ಹಾಲುತುಪ್ಪ ಬಿಟ್ಟು, ಅಸ್ಥಿಯನ್ನು ತೆಗೆದುಕೊಂಡು ಹೋಗಲಾಗಿದೆ. ಸ್ಪಂದನಾ ಆತ್ಮಕ್ಕೆ ಶಾಂತಿ ಕೋರಿ ಅನೇಕ ವಿಧಿ ವಿಧಾನಗಳು ನೆರವೇರಿದವು.










