ಕಾರಿನ ಬಾನೆಟ್ ಮೇಲೆ ವೈದ್ಯನನ್ನು ಸುಮಾರು 50 ಮೀಟರ್ ನಷ್ಟು ದೂರದವರೆಗೆ ಎಳೆದೊಯ್ದ ಚಾಲಕ…

128
firstsuddi

ಚಂಡೀಗಢ: ವೈದ್ಯರೊಬ್ಬರನ್ನು ಕಾರಿನ ಬಾನೆಟ್ ಮೇಲೆ ಸುಮಾರು 50 ಮೀಟರ್ ನಷ್ಟು ದೂರದವರೆಗೆ ಚಾಲಕ ಎಳೆದೊಯ್ದ ಘಟನೆ ಹರಿಯಾಣದ ಪಂಚಕುಳದ ಸೆಕ್ಟರ್-8 ರಲ್ಲಿ ನಡೆದಿದೆ.

ವೈದ್ಯನನ್ನು ಡಾ. ಗಗನ್ ಗರ್ಗ್ (42) ಎಂದು ಗುರುತಿಸಲಾಗಿದೆ. ಇವರು ಸೆಕ್ಟರ್ 4 ಮಾನಸ ದೇವಿ ಕಾಂಪ್ಲೆಕ್ಸ್ ನಿವಾಸಿಯಾಗಿದ್ದು, ಪಂಚಕುಳದ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೈದ್ಯರು, ಟ್ಯೂಷನ್​ಗೆ ಹೋಗಿದ್ದ ಮಗನನ್ನು ಕರೆದುಕೊಂಡು ಬರಲು ಹೋಗಿದ್ದರು, ಈ ವೇಳೆ ವೈದ್ಯರ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿತ್ತು. ಅದನ್ನು ಪ್ರಶ್ನಿಸಲು ಕಾರಿನಿಂದ ಕೆಳಗಿಳಿದಿದ್ದ ಸಂದರ್ಭದಲ್ಲಿ ಕಾರು ಚಾಲಕ ವೈದನ ಜೊತೆ ಜಗಳವಾಡಿದ್ದಾನೆ. ಅಲ್ಲದೆ ಅವಾಚ್ಯವಾಗಿ ನಿಂದಿಸಿದ ಆತ, ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ. ಬಳಿಕ ಕಾರನ್ನು ಅವರ ಮೇಲೆಯೇ ಹರಿಸಲು ಯತ್ನಿಸಿದ್ದಾನೆ. ಆಗ ವೈದ್ಯರು ಬಾನೆಟ್ ಮೇಲೆ ಬಿದ್ದಿದ್ದು, ಅವರನ್ನು ಸುಮಾರು 50 ಮೀಟರ್ ನಷ್ಟು ದೂರ ಎಳೆದೊಯ್ದಿದ್ದಾನೆ.

ಈ ಸಂಬಂಧ ಗಗನ್, ಪಂಚಕುಳ ಪೊಲೀಸರಿಗೆ ದೂರು ನೀಡಿದ್ದು, ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯುವಕನೊಬ್ಬ ಘಟನೆಯ ಸಂಪೂರ್ಣ ವೀಡಿಯೋ ಮಾಡಿದ್ದಾನೆ. ಈ ವೀಡಿಯೋ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.