ಎರಡ್ಮೂರು ದಿನಗಳ ಹಿಂದೆಯಷ್ಟೇ ಮಗಳನ್ನು ಕಳೆದುಕೊಂಡಿರುವ ನಟ ವಿಜಯ್ ಆಂಟೋನಿ ಭಾವುಕ ಪತ್ರವೊಂದನ್ನು ಬರೆದಿದ್ದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಜಯ್ ಕಳೆದ ರಾತ್ರಿ ಟ್ವಿಟ್ಟರ್ ಮೂಲಕ ಭಾವುಕ ನುಡಿಗಳನ್ನು ಬರೆದಿದ್ದು, ನನ್ನ ಮಗಳು ಮೀರಾ ಧೈರ್ಯಶಾಲಿ, ಕರುಣಾಮಯಿ. ಹಣ, ಅಸೂಯೆ, ಜಾತಿ, ಧರ್ಮಗಳೇ ಇಲ್ಲದ ಪ್ರಶಾಂತ ಸ್ಥಳಕ್ಕೆ ಆಕೆ ಹೋಗಿದ್ದಾಳೆ. ಇನ್ನೂ ಆಕೆ ನನ್ನೊಂದಿಗೆ ಮಾತನಾಡುತ್ತಾಳೆ. ನನ್ನ ಯಾವುದೇ ಶುಭ ಕಾರ್ಯಗಳು ಇದ್ದರೂ, ಆಕೆಗೆ ಅರ್ಪಿಸುವ ಮೂಲಕ ಕೆಲಸ ಶುರು ಮಾಡುತ್ತೇನೆ. ನನ್ನ ಜೊತೆ ಆಕೆ ಯಾವತ್ತಿಗೂ ಇರುತ್ತಾಳೆ’ ಎಂದು ವಿಜಯ್ ನೋವಿನಿಂದ ಬರೆದುಕೊಂಡಿದ್ದಾರೆ.
ನಟ, ನಿರ್ಮಾಪಕ, ಸಂಗೀತ ನಿರ್ದೇಶಕ ವಿಜಯ್ ಆಂಟೋನಿ ಪುತ್ರಿ ಮೀರಾ ಮೊನ್ನೆಯಷ್ಟೇ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದರು. ಹನ್ನೆರಡನೇ ತರಗತಿ ಓದುತ್ತಿದ್ದ ಮೀರಾ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.
ಶಾಲೆಯಲ್ಲಿ ಉತ್ತಮ ಅಂಕಗಳನ್ನೇ ಪಡೆಯುತ್ತಿದ್ದ ಮೀರಾ, ಮಾನಸಿಕ ಖಿನ್ನತೆಗೆ ಜಾರುವುದಕ್ಕೆ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಿಜಯ್ ಆಂಟೋನಿ ಮತ್ತು ಫಾತಿಮಾ ದಂಪತಿಯ ಮೊದಲ ಮಗು ಮೀರಾ. ಈ ದಂಪತಿಗೆ ಮತ್ತೊಬ್ಬ ಮಗನಿದ್ದಾನೆ.










