‘ಕೊರಗಜ್ಜ’ ಸಿನಿಮಾದ ಶೂಟಿಂಗ್ ವೇಳೆ ಗೂಂಡಾಗಳ ಎಂಟ್ರಿ- ಚಿತ್ರೀಕರಣ ಸ್ಥಗಿತಗೊಳಿಸಿದ ತಂಡ…

66
firstsuddi

ಸುಧೀರ್ ಅತ್ತಾರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾದ ಶೂಟಿಂಗ್ ವೇಳೆ ಲಾಂಗ್ ಹಿಡಿದುಕೊಂಡು ಗೂಂಡಾಗಳು ಎಂಟ್ರಿ ಕೊಟ್ಟಿದ್ದಾರೆ. ಖ್ಯಾತ ಬಾಲಿವುಡ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಮತ್ತು ಶುಭಾ ಪೂಂಜಾ ಸೇರಿದಂತೆ ಮೊದಲಾದವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಲ್ವಾರ್ ಹಿಡಿದುಕೊಂಡು ನುಗ್ಗಿದ ತಂಡವು ಚಿತ್ರೀಕರಣಕ್ಕೆ ಅಡ್ಡಿ ಪಡಿಸಿದೆ.

ಕುದುರೆಮುಖ ಸಮೀಪದ ಕಳಸದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ಹಾಡಿನಲ್ಲಿ ಶುಭಾ ಪೂಂಜಾ ಕಾಣಿಸಿಕೊಳ್ಳುತ್ತಿದ್ದರೆ, ಗಣೇಶ್ ಆಚಾರ್ಯ ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ತಲ್ವಾರ್ ಹಿಡಿದುಕೊಂಡು ಗುಂಪು ನುಗ್ಗಿದೆ. ಈ ಸಿನಿಮಾ ಮಾಡದಂತೆ ತಡೆಯುವ ಪ್ರಯತ್ನ ಮಾಡಿದೆ. ಹೀಗೆ ಅನೇಕ ಬಾರಿಯೂ ಅಲ್ಲಲ್ಲಿ ಇಂತಹ ತೊಂದರೆಗಳನ್ನು ಸಿನಿಮಾ ತಂಡ ಎದುರಿಸುತ್ತಿದೆ.

ದೈವ ಆರಾಧನೆ ಮಾಡುವ ಸಮುದಾಯದಿಂದ ಈ ರೀತಿ ತೊಂದರೆ ಆಗಿದೆ ಎಂದು ನಿರ್ದೇಶಕ ಸುಧೀರ್ ಅವರು ಹೇಳಿದ್ದಾರೆ. ‘ಅಕ್ಟೋಬರ್ 27ರಂದು ಶೂಟ್ ನಡೆಯುತ್ತಿತ್ತು. ಬೆಳಿಗ್ಗೆ ಶೂಟ್ ಮಾಡಿದೆವು. ಮಧ್ಯಾಹ್ನ ಊಟದ ನಂತರ ಕೆಲವರು ತಲ್ವಾರ್ ಹಿಡಿದು ಸೆಟ್​ಗೆ ಬಂದರು. ಅವರು ಆವೇಶದಲ್ಲಿ ಇದ್ದರು. ನಂತರ ಮತ್ತೊಂದು ತಂಡದವರು ಸೆಟ್​ನ ಪರಿಶೀಲಿಸಿದ್ದಾರೆ. ಆ ಬಳಿಕ ಮೂರನೇ ತಂಡ ಕೂಡ ಬಂತು. ಅಲ್ಲಿ ಬಿಜೆಪಿ ನಾಯಕರಿದ್ದರು’ ಎಂದು ಸುಧೀರ್ ಮಾಹಿತಿ ನೀಡಿದ್ದಾರೆ.

‘ನನಗೆ ನನ್ನ ಟೀಮ್ ಮುಖ್ಯವಾಗಿತ್ತು. ಹೀಗಾಗಿ, ತಂಡದ ಜೊತೆ ಹೊರಟೆ. ಮಂಗಳೂರಿನಲ್ಲಿ ಶೂಟ್ ಮಾಡುವಾಗಲೂ ಹೀಗೆಯೇ ಆಗಿತ್ತು. ಭೂತರಾಧನೆ ಕುರಿತು ಸಿನಿಮಾ ಮಾಡಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಅನಿಸುತ್ತದೆ. ಕೊರಗಜ್ಜನ ಬಗ್ಗೆ ಸಿನಿಮಾ ಮಾಡುತ್ತಿರುವ ಕಾರಣದಿಂದ ಈ ರೀತಿ ಮಾಡಲಾಗಿದೆ. ಬಹುಶಃ ಎಲ್ಲರೂ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಅನಿಸುತ್ತಿದೆ ಎಂದಿದ್ದಾರೆ.