ಅಪಾರ್ಟ್‌ಮೆಂಟ್ ಟೆರೇಸ್ ನಿಂದ ಜಿಗಿದು ಜಿಮ್‌ ತರಬೇತುದಾರ ಆತ್ಮಹತ್ಯೆ…

41
firstsuddi

ಬೆಂಗಳೂರು: ಅಪಾರ್ಟ್‌ಮೆಂಟ್ ವೊಂದರ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಜಿಮ್ ತರಬೇತುದಾರನೊಬ್ಬ ಸಾವನ್ನಪ್ಪಿರುವ ಘಟನೆ ನಿನ್ನೆ ನಗರದ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹರಳೂರು-ಸರ್ಜಾಪುರ ಮುಖ್ಯರಸ್ತೆಯ ಅಪಾರ್ಟ್ ಮೆಂಟ್ ನಿವಾಸಿ ಗಣೇಶ್ ಪಾಂಡ (32) ಮೃತ ವ್ಯಕ್ತಿಯಾಗಿದ್ದಾರೆ. ಒಡಿಸ್ಸಾ ಮೂಲದ ಗಣೇಶ್ ಪಾಂಡ ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದು ಜಿಮ್ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದರು. ಹರಳಸೂರು ಸರ್ಜಾಪುರ ರಸ್ತೆಯಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಅಕ್ಕ-ಬಾವನ ಜತೆಗೆ ನೆಲೆಸಿದ್ದರು. ಇತ್ತೀಚೆಗೆ ವಿಪರೀತ ಮದ್ಯ ಸೇವಿಸುತ್ತಿದ್ದರು. ಮದ್ಯ ಬಿಡಿಸಲು ಅಕ್ಕ-ಬಾವ ಸಾಕಷ್ಟು ಪ್ರಯತ್ನಿಸಿದ್ದರು. ಆದರೂ ಆವರನ್ನು ಮದ್ಯದ ಚಟದಿಂದ ಬಿಡಿಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿದು ಬಂದಿದೆ.

‘ಭಾನುವಾರ ರಾತ್ರಿ ಟೆರೇಸ್ ಮೇಲೆ ಹೋಗಿದ್ದ ಗಣೇಶ್, ಅಲ್ಲಿಯೇ ಮದ್ಯ ಕುಡಿದಿದ್ದನೆಂದು ತಿಳಿದುಬಂದಿದೆ. ನಂತರ, ನಾಲ್ಕನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ. ಇದರಿಂದ ತಲೆ, ಕೈ-ಕಾಲುಗಳಿಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಗಣೇಶ ಪಾಂಡ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.