ಬೆಂಗಳೂರು: ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ‘ಯುವನಿಧಿ ಯೋಜನೆ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಾಲನೆ ನೀಡಿದ್ದಾರೆ.
ನಗರದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ಸಿಎಂ ಮತ್ತು ಗಣ್ಯರು, ಓರ್ವ ಯುವತಿ ಹಾಗೂ ಯುವಕನನ್ನ ವೇದಿಕೆ ಮೇಲೆ ಕರೆಸಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಬಳಿಕ ಸಿಎಂ ಹಾಗೂ ಡಿಸಿಎಂ ಯುವನಿಧಿ ಯೋಜನೆ ಪೋಸ್ಟರ್ ಬಿಡುಗಡೆ ಮಾಡಿದರು. ಇದೇ ವೇಳೆ ಸಿಎಂ ಅವರು ಯುವನಿಧಿ ಯೋಜನೆಯ ಲೋಗೋ ಬಿಡುಗಡೆ ಮಾಡಿದರು. ನಂತರ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಗ್ಯಾರಂಟಿ ಯೋಜನೆಗಳ ಟೀಕಿಸಿದ್ದ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಕಾಂಗ್ರೆಸ್ ಕೊಟ್ಟಾಗ, ಅದನ್ನು ಜಾರಿ ಮಾಡಲು ಆಗುವುದಿಲ್ಲ. ಜಾರಿಯಾದರೆ ಕರ್ನಾಟಕ ಸರ್ಕಾರ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದರು. ಆದರೆ, ರಾಜ್ಯ ದಿವಾಳಿ ಆಗಿಲ್ಲ, ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಗ್ಯಾರಂಟಿ ಜಾರಿ ಮಾಡಿದ ಮೇಲೂ ಕರ್ನಾಟಕ ಸರ್ಕಾರ ಸದೃಢವಾಗಿದೆ, ದಿವಾಳಿಯಾಗಿಲ್ಲ. ಏನು ಇವರು ದೊಡ್ಡ ಆರ್ಥಿಕ ತಜ್ಞರಾ? ಎಂದು ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.
ನಮ್ಮ ಗ್ಯಾರಂಟಿ ಘೋಷಣೆ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣದಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ದರು. ಈ ಆರ್ಥಿಕ ವರ್ಷದಲ್ಲಿ ಗ್ಯಾರಂಟಿ ಜಾರಿಗೆ 39,000 ಕೋಟಿ ಖರ್ಚು ಆಗುತ್ತದೆ. ಹೀಗಿದ್ದರೂ ಬಜೆಟ್ ಕಾರ್ಯಕ್ರಮಗಳಿಗೆ ಹಣ ಒದಗಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.
ಕರ್ನಾಟಕದಲ್ಲಿ ಪದವಿ ಹಾಗೂ ಡಿಪ್ಲೊಮಾ ಓದಿ ಉದ್ಯೋಗ ಇಲ್ಲದ 5,29,000 ಯುವಕ- ಯುವತಿಯರು ಇದ್ದಾರೆ. ಈ ಪೈಕಿ 4,21,000 ಸಾವಿರ ಪದವೀಧರರು ಹಾಗೂ 48,000 ಡಿಪ್ಲೊಮಾ ಪದವೀಧರರು ಇದ್ದಾರೆಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್, ಸಚಿವರಾದ ಶರಣು ಪ್ರಕಾಶ್ ಪಾಟೀಲ್, ಸುಧಾಕರ್, ನಾಗೇಂದ್ರ, ಪ್ರಿಯಾಂಕ್ ಖರ್ಗೆ ಸೇರಿ ಹಲವು ಭಾಗಿಯಾಗಿದ್ದಾರೆ.










