ಹೊಸ ವರ್ಷಾಚರಣೆ: ತಡರಾತ್ರಿ 2:15 ರವರೆಗೆ ಮೆಟ್ರೋ ಸೇವೆ…

39
firstsuddi

ಬೆಂಗಳೂರು: ಹೊಸ ವರ್ಷಾಚರಣೆಗೆ ಅನುಕೂಲವಾಗುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಡಿಸೆಂಬರ್ 31ರ ಮಧ್ಯರಾತ್ರಿಯಿಂದ ಜನವರಿ 1 ರ ಬೆಳಗಿನ ಜಾವ 2:15 ರವರೆಗೆ ನಮ್ಮ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸಿದೆ.

2024 ರ ಹೊಸ ವರ್ಷದ ಮುನ್ನಾದಿನ, ನಿಗಮವು ಮೆಟ್ರೋ ರೈಲು ಸೇವೆಗಳನ್ನು ನೇರಳೆ ಮತ್ತು ಹಸಿರು ಮಾರ್ಗದಲ್ಲಿ ವಿಸ್ತರಿಸುತ್ತಿದೆ. ಜ.1 ರ ಮಧ್ಯರಾತ್ರಿ 1:30 ಗಂಟೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ಸೇವೆ ಇರಲಿದೆ. 15 ನಿಮಿಷದ ಅವಧಿಗೆ ಒಂದರಂತೆ ಮೆಟ್ರೋ ಸಂಚರಿಸಲಿವೆ. ಮೆಜೆಸ್ಟಿಕ್‌ನಿಂದ ಜ.1 ರ ಬೆಳಗಿನ ಜಾವ 2:15 ರ ವರೆಗೆ ಎಲ್ಲಾ ನಾಲ್ಕು ದಿಕ್ಕುಗಳಿಗೂ ಕೊನೆಯ ರೈಲು ಸೇವೆ ಇರಲಿದೆ.

ಸಾರ್ವಜನಿಕರ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಎಂ.ಜಿ. ರೋಡ್ ಮೆಟ್ರೋ ನಿಲ್ದಾಣವನ್ನು ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನಕ್ಕೆ ಡಿ.31 ರ ರಾತ್ರಿ 11 ಗಂಟೆಗೆ ಮುಚ್ಚಲಾಗುವುದು. ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಇರುವುದಿಲ್ಲ. ಮೆಟ್ರೋ ರೈಲುಗಳು ಪಕ್ಕದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಎಂದಿನಂತೆ ನಿಲ್ಲುತ್ತವೆ.

ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಪ್ರಯಾಣಿಕರಿಗೆ 50 ರೂಪಾಯಿಗೆ ಪೇಪರ್ ಟಿಕೆಟ್ ನೀಡಲಾಗುತ್ತದೆ. ಡಿಸೆಂಬರ್ 31 ರಂದು ಮಧ್ಯರಾತ್ರಿ ಟಿಕೆಟ್ ವಿತರಣೆ ಇರುವುದಿಲ್ಲವಾದ್ದರಿಂದ ಪೇಪರ್ ಟಿಕೆಟ್‌ಗಳನ್ನು ಮುಂಚಿತವಾಗಿ ಪಡೆಯಬೇಕು. ಸ್ಮಾರ್ಟ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ಹೊಂದಿರುವ ಪ್ರಯಾಣಿಕರು ಎಂದಿನಂತೆ ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.