ಬೆಂಗಳೂರು: ಸಸ್ಪೆಂಡ್ ಮಾಡಿದ್ದಕ್ಕೆ ಮನನೊಂದು ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ರಾತ್ರಿ ನಗರದ ನಾಗರಬಾವಿಯ ವಿನಾಯಕ ಲೇಔಟ್‌ನಲ್ಲಿ ನಡೆದಿದೆ.
ನಿಖಿಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಎಎಂಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ಹೋಟೆಲ್ ಮ್ಯಾನೇಜ್ ಮೆಂಟ್ ವಿಭಾಗದಲ್ಲಿ ಓದುತ್ತಿದ್ದ. ನಿಖಿಲ್ಗೆ ಕಳೆದ ಒಂದು ತಿಂಗಳಿಂದ ಕಾಲೇಜು ಡೀನ್ ಕಿರುಕುಳ ನೀಡುತ್ತಿದ್ದರಂತೆ. ಜೊತೆಗೆ ನನ್ನ ಎದುರೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇವೆಲ್ಲದರಿಂದ ಬೇಸತ್ತಿದ್ದ ನನ್ನ ಮಗ ಮನೆಯಲ್ಲಿದ್ದ ಮಾತ್ರೆಗಳನ್ನ ಸೇವಿಸಿದ್ದ. ಕೂಡಲೇ ನಾಗರಬಾವಿಯ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದೇವು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ ಎಂದು ತಾಯಿ ಕಾಲೇಜು ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 15 ದಿನಗಳ ಹಿಂದೆ ನಿಖಿಲ್ ವಿದ್ಯಾರ್ಥಿನಿಯೊಬ್ಬಳ ಜೊತೆ ಜಗಳ ಮಾಡಿಕೊಂಡಿದ್ದನಂತೆ. ತನ್ನ ತಪ್ಪಿಲ್ಲದಿದ್ದರೂ ಕಾಲೇಜು ಆಡಳಿತ ಮಂಡಳಿ ನಿಖಿಲ್‌ನನ್ನ ಸಸ್ಪೆಂಡ್ ಮಾಡಿದ್ದರು. ಇದರಿಂದ ನಿಖಿಲ್ ತಾಯಿಯೊಂದಿಗೆ ಮತ್ತೆ ಕಾಲೇಜಿಗೆ ಹೋಗಿ ಕ್ಷಮೆ ಕೇಳಿದ್ದನು. ಅಪಾಲಜಿ ಲೆಟರ್ ಬರೆದುಕೊಟ್ಟಿದ್ರು ಮತ್ತೆ ಕಾಲೇಜಿಗೆ ಬರಲು ಅವಕಾಶ ಕೊಟ್ಟಿರಲಿಲ್ಲವಂತೆ. ಅಷ್ಟೇ ಅಲ್ಲದೆ ಕಾಲೇಜು ಸಿಬ್ಬಂದಿ ಹಲ್ಲೆ ಮಾಡಿ ಬೈದು ಕಾಲೇಜಿನಿಂದ ಹೊರಹಾಕಿದ್ದಾಗಿ ಪೋಷಕರು ಆರೋಪಿಸಿದ್ದಾರೆ.
ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ನಿಖಿಲ್ ಸುರೇಶ್ ಪೋಷಕರು ಕಾಲೇಜಿನ ಮುಂಭಾಗ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.










