ಚಿಕ್ಕಮಗಳೂರು: ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣವಂತರಾಗಬೇಕು ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಸಲಹೆ ಮಾಡಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆಯ ಪರ್ವತವರ್ಧನ ಎಂ.ಎಲ್.ವಾಸುದೇವಮೂರ್ತಿ ಪ್ರೌಢಶಾಲೆಯಲ್ಲಿ ನಿನ್ನೆ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದೆ ಬಡ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಹಲವು ಮೈಲಿಗಳಷ್ಟು ದೂರ ನಡೆದು ಅವರಿವರ ಮನೆಯಲ್ಲಿ ವಾರಾನ್ನದ ಊಟ ಮಾಡಿ, ವಿದ್ಯಾರ್ಜನೆ ಮಾಡಬೇಕಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಿಗಾಗಿ ಅನೇಕ ಸವಲತ್ತುಗಳನ್ನು ನೀಡುತ್ತಿವೆ ಎಂದರು.
ವಿದ್ಯಾರ್ಥಿಗಳು ಅವುಗಳನ್ನು ಸುದುಪಯೋಗಪಡಿಸಿಕೊಳ್ಳಬೇಕು. ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮಲೆನಾಡು ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿ ಹೆತ್ತವರು ಮತ್ತು ಶಾಲೆಗೆ ಕೀರ್ತಿತರಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಶಿಸ್ತು ಮತ್ತು ಸಂಸ್ಕಾರವನ್ನು ಕಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಬಿ.ಎಂ.ಲೋಕೇಶ್ ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಎಸ್.ಎಸ್. ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಯಿತು.
ಇದಕ್ಕೂ ಮುನ್ನ ನಡೆದ ಶಾಲಾ ಕ್ರೀಡೋತ್ಸವವನ್ನು ಸಂಸ್ಥೆಯ ಉಪಾಧ್ಯಕ್ಷೆ ರಾಧಾ ಸುಂದರೇಶ್ ಉದ್ಘಾಟಿಸಿದರು. ಆಶಾಕಿರಣ ಅಂದ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ಸಂಸ್ಥೆಯ ನಿರ್ದೇಶಕ ಎಸ್.ವಿ.ಕನಕರಾಜ್, ಕ್ರೀಡಾಪಟು ಲತಾಜಯಕುಮಾರ್, ಸಂಸ್ಥೆಯ ಸಹಕಾರ್ಯದರ್ಶಿ ಎಸ್.ಶಂಕರನಾರಾಯಣ ಭಟ್, ನಿರ್ದೇಶಕಿ ಜಯಶ್ರೀ ಜೋಶಿ, ಶೈಕ್ಷಣಿಕ ಸಲಹೆಗಾರ ಕೆ.ಎನ್.ಮಂಜುನಾಥ ಭಟ್, ವ್ಯವಸ್ಥಾಪಕಿ ಶ್ರೀಲಕ್ಷ್ಮಿ, ನಿವೃತ್ತ ಶಿಕ್ಷಕ ಲಕ್ಷ್ಮೀನಾರಾಯಣ, ಶಿಕ್ಷಕರಾದ ಬಿ.ಸುರೇಶ್, ಎನ್.ರೂಪ, ಹೆಚ್.ಎನ್.ಸತೀಶ್ ಉಪಸ್ಥಿತರಿದ್ದರು.










