ಕನ್ನಡ ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕುಣಿಗಲ್ ತಾಲೂಕು ಕೋಡಿಹಳ್ಳಿಪಾಳ್ಯ ನಿವಾಸಿ ಜಗದೀಶ್ (44) ಮೃತ ದುರ್ದೈವಿ. ಅಪಘಾತದಲ್ಲಿ ಗಾಯಗೊಂಡಿದ್ದ ಜಗದೀಶ್ ಅವರನ್ನು ಕೂಡಲೇ ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾರೆ.
ಘಟನೆಯ ವಿವರ:- ನಿನ್ನೆ ರಾತ್ರಿ ಶೂಟಿಂಗ್ ಮುಗಿಸಿಕೊಂಡು ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ತುಕಾಲಿ ಸಂತೋಷ್ ಅವರು ಪತ್ನಿ ಮಾನಸಾ ಜೊತೆ ಪ್ರಯಾಣಿಸುತ್ತಿದ್ದರು. ಅದೇ ವೇಳೆ ಕುಣಿಗಲ್ನಿಂದ ಕುರುಡಿಹಳ್ಳಿಗೆ ಆಟೋ ತೆರಳುತ್ತಿತ್ತು. ತುಕಾಲಿ ಸಂತೋಷ್ ಕಾರಿನ ಬಲ ಭಾಗಕ್ಕೆ ಆಟೋ ಡಿಕ್ಕಿ ಹೊಡೆದಿದ್ದು, ಆಟೋ ಬಹುತೇಕ ನಜ್ಜುಗುಜ್ಜಾಗಿತ್ತು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಈ ಅಪಘಾತ ನಡೆದಿದೆ.
ಗಾಯಗೊಂಡಿದ್ದ ಆಟೋ ಚಾಲಕ ಜಗದೀಶ್ ಅವರನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ದೂರು ಪ್ರತಿದೂರು ದಾಖಲಿಸಲು ಎರಡೂ ಕಡೆಯವರು ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಟೋ ಡ್ರೈವರ್ ಕಾರ್‌ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ತುಕಾಲಿ ಸಂತು ಆರೋಪಿಸುತ್ತಿದ್ದರು.
ಈ ಕುರಿತು ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










