ದಾವಣಗೆರೆ: ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದ ಜಾಮಿಯಾ ಮಸೀದಿ ಬಳಿ ನಡೆದಿದೆ.
ರಂಜಾನ್ ಹಬ್ಬದ ಹಿನ್ನೆಲೆ ಉಪವಾಸ ಅಂತ್ಯ ಮಾಡಿದ ಮಕ್ಕಳು, ಜಾಮೀಯಾ ಮಸೀದಿ ಬಳಿ ಪಾನಿಪೂರಿ ಸೇವಿಸಿದ್ದಾರೆ. ಇದಾದ ಕೆಲವೇ ಗಂಟೆಯಲ್ಲಿ ಎಲ್ಲ ಮಕ್ಕಳಿಗೆ ಇದ್ದಕ್ಕಿದ್ದಂತೆ ವಾಂತಿ, ಭೇದಿ, ಹೊಟ್ಟೆ ನೋವು ಆರಂಭವಾಗಿದೆ. ಕೂಡಲೇ ಪೋಷಕರು ಮಕ್ಕಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
19 ಮಕ್ಕಳ ಪೈಕಿ 4 ಮಕ್ಕಳ ಆರೋಗ್ಯ ಚಿಂತಾಜನಕವಾಗಿದೆ. ಇವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ರವಾನಿಸಲಾಗಿದೆ. ಇನ್ನು ಮಾಹಿತಿ ತಿಳಿದು ಹರಿಹರ ತಹಶೀಲ್ದಾರ್ ಗುರು ಬಸವರಾಜ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಈ ವಿಚಾರ ತಿಳಿದು ಪಾನಿಪುರಿ ಅಂಗಡಿ ಬಿಟ್ಟು ಮಾರಾಟಗಾರ ಎಸ್ಕೇಪ್ ಆಗಿರುವ ಘಟನೆ ಕೂಡ ನಡೆದಿದ್ದು, ಮಾರಾಟಗಾರನ ಹುಡುಕಾಟ ನಡೆಸಲಾಗಿದೆ. ಈ ಘಟನೆ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.










