ರೋಚಕ ಪಂದ್ಯದಲ್ಲಿ ಆರ್‌ಸಿಬಿಗೆ 8 ವಿಕೆಟ್‌ಗಳ ಭರ್ಜರಿ ಜಯ- ಚೊಚ್ಚಲ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡ ವನಿತೆಯರು…

54
firstsuddi

ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ 2024 ಎರಡನೇ ಆವೃತ್ತಿಯ ಟ್ರೋಫಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎತ್ತಿ ಹಿಡಿದೆ. ಈ ಮೂಲಕ 16 ಆವೃತ್ತಿ ಕಳೆದರೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಮ್ಮೆಯೂ ಟ್ರೋಫಿ ಎತ್ತಿಹಿಡಿಯದ ಆರ್‌ಸಿಬಿ ಪುರುಷರ ತಂಡಕ್ಕೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಮಾದರಿಯಾಗಿದೆ.

ಟೂರ್ನಿಯುದ್ದಕ್ಕೂ ಉತ್ತಮ ಆಟ ಪ್ರದರ್ಶಿಸಿದ ಆರ್‌ಸಿಬಿ ತಂಡ ಸಂಘಟಿತ ಆಟ ಕಪ್ ಗೆಲ್ಲಲು ಸಹಕಾರಿಯಾಯಿತು. ನವದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.3 ಓವರ್‌ಗಳಲ್ಲಿ 113 ರನ್​ಗಳಿಗೆ ಆಲೌಟ್ ಆಗುವ ಮೂಲಕ ಆರ್‌ಸಿಬಿಗೆ 114 ರನ್​ಗಳ ಸುಲಭವಾದ ಟಾರ್ಗೆಟ್ ನೀಡಿತ್ತು. ಆರ್‌ಸಿಬಿ ಭರ್ಜರಿ ಬೌಲಿಂಗ್ ಪ್ರದರ್ಶನದಿಂದಾಗಿ ಡೆಲ್ಲಿ ತನ್ನ ವಿಕೆಟ್​ಗಳನ್ನು ಕಳೆದುಕೊಂಡು ಶಫಾಲಿ ವರ್ಮಾ ಅವರ 44 ರನ್ ಮತ್ತು ನಾಯಕಿ ಲ್ಯಾನಿಂಗ್ ಅವರ 23 ರನ್​ಗಳಿಂದ ಡೆಲ್ಲಿ ನೂರರ ರನ್ ಗಡಿ ದಾಟಿತು. ಆರ್‌ಸಿಬಿ ಪರ ಶ್ರೇಯಾಂಕಾ ಪಾಟೀಲ್ 4 ವಿಕೆಟ್, ಸೋಫಿ ಮೊಲಿನೆಕ್ಸ್ 3 ಹಾಗು ಆಶಾ ಸೋಭಾನ 2 ವಿಕೆಟ್ ಉರುಳಿಸಿದರು.

114 ರನ್​ಗಳ ಸುಲಭ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಸಹ ನಿಧಾನಗತಿ ಬ್ಯಾಟಿಂಗ್ ನಡೆಸಿತು. ವಿಕೆಟ್ ತೆಗೆಯದಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಫೀಲ್ಡಿಂಗ್ ಪ್ರದರ್ಶನ ತೋರಿತ್ತು. ಇದರಿಂದ ವಿಜಯಲಕ್ಷ್ಮಿ ಯಾರ ಪಾಲಿಗೆ ಒಲಿಯುತ್ತಾಳೆ ಎಂಬ ಕುತೂಹಲ ಕೊನೆಯವರೆಗೂ ಇತ್ತು. ಓವರ್‌ನಲ್ಲೂ ಒಂದೊಂದು ಎಸೆತವೂ ಏನಾಗುತ್ತದೆ ಎಂದು ಅಭಿಮಾನಿಗಳು ಕುತೂಹಲದಿಂದಲೇ ವೀಕ್ಷಿಸುತ್ತಾ, ಕ್ಷಣ ಕ್ಷಣಕ್ಕೂ ಆರ್‌ಸಿಬಿ ಆರ್‌ಸಿಬಿ ಘೋಷಣೆ ಕೂಗುತ್ತಿದ್ದರು. ಆರ್‌ಸಿಬಿ ಪರ ಸ್ಮೃತಿ ಮಂದಾನ 31 ರನ್, ಸೋಫಿ ಡಿವೈನ್ 32 ರನ್, ಗಳಿಸಿದ್ರೆ, ಕೊನೇ ವರೆಗೂ ಹೋರಾಟ ನಡೆಸಿದ ಆಲ್‌ರೌಂಡರ್‌ ಎಲ್ಲಿಸ್ ಪೆರ್ರಿ 35 ರನ್, ರಿಚಾ ಘೋಷ್ 17 ರನ್ ಗಳಿಸುವ ಮೂಲಕ ಆರ್‌ಸಿಬಿಗೆ ಚೊಚ್ಚಲ ಪ್ರಶಸ್ತಿಯನ್ನು ತಂದು ಕೊಡುವಲ್ಲಿ ಯಶಸ್ವಿಯಾದರು. ಡೆಲ್ಲಿ ಪರ ಶಿಖಾ ಪಾಂಡೆ ಮತ್ತು ಮಿನ್ನು ಮಣಿ ತಲಾ ಒಂದು ವಿಕೆಟ್ ಪಡೆದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ ರಾಜಧಾನಿಯ ಪ್ರಮುಖ ಬೀದಿಗಳಲ್ಲಿ ಕಣಕ್ಕಿಳಿದ ಆರ್‌ಸಿಬಿ ಅಭಿಮಾನಿಗಳು ಈ ಸಲ ಕಪ್ ನಮ್ದು… ಎಂಬ ಘೋಷವಾಕ್ಯದೊಂದಿಗೆ ಸಂಭ್ರಮಿಸಿದರು. ಅಲ್ಲದೆ ಹಾಡುಗಳೊಂದಿಗೆ, ಪಟಾಕಿ ಸಿಡಿಸಿ ಸಂತಸ ಹಂಚಿಕೊಂಡರು. ಇದೀಗ ಆರ್‌ಸಿಬಿ ಅಭಿಮಾನಿಗಳ ಸಖತ್ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್(ವಿ.ಕೀ), ಸೋಫಿ, ಜಾರ್ಜಿಯಾ ವಾರೆಹಮ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನ, ರೇಣುಕಾ ಠಾಕೂರ್ ಸಿಂಗ್.