ಕಲಬುರಗಿ: 18ನೇ ಶತಮಾನದ ಸಂತ, ದಾಸೋಹ ಯೋಗಿ ಶ್ರೀ ಶರಣಬಸವೇಶ್ವರರ 202ನೇ ಜಾತ್ರಾ ಮಹೋತ್ಸವದ ನಿಮಿತ್ತ ನಿನ್ನೆ ಸಂಜೆ ಜರುಗಿದ ಉಚ್ಛಾಯಿ (ಚಿಕ್ಕ ರಥ) ಎಳೆಯುವ ವೇಳೆ ಭಾರೀ ಅವಘಡ ಸಂಭವಿಸಿದೆ. ರಥದ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ಮೃತಪಟ್ಟಿದ್ದಾರೆ.
ರಾಮು ಸಿದ್ದಪ್ಪ (28) ಮೃತ ಹೋಂಗಾರ್ಡ್. ಮೃತ ರಾಮು ಮೂಲತಃ ಬೀದರ್ ಜಿಲ್ಲೆಯ ಇಟಗಾ ಗ್ರಾಮದವರು. ಘಟನೆಯಲ್ಲಿ ಮತ್ತೋರ್ವ ಸಿಬ್ಬಂದಿ ಅಶೋಕರೆಡ್ಡಿಗೆ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಥ ಎಳೆಯುವ ವೇಳೆ ಅಪಾರ ಸಂಖ್ಯೆಯ ಭಕ್ತರು ಸೇರಿದ್ದರು. ಉಚ್ಛಾಯಿಯನ್ನು ಸುಗಮವಾಗಿ ಎಳೆಯುವ ಸಲುವಾಗಿ ಸುಮಾರು 100 ಸಿಬ್ಬಂದಿಗಳನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿತ್ತು. ಬಹುಸಂಖ್ಯೆಯಲ್ಲಿ ಆಗಮಿಸಿದ ಭಕ್ತರನ್ನು ಬದಿಗೆ ಸರಿಸುತ್ತ ಹೋಗುವಾಗ ಮಾರ್ಗ ಮಧ್ಯದಲ್ಲಿ ರಾಮು ವಾಲಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಆತನ ಮೇಲೆ ಉಚ್ಛಾಯಿ ಚಕ್ರಗಳು ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ರಾಮುನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರ್‌ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










