ಖಾಸಗಿ ಬಸ್ ಪಲ್ಟಿ- ಮೂವರು ಸಾವು, 38ಕ್ಕೂ ಹೆಚ್ಚು ಮಂದಿಗೆ ಗಾಯ…

29
firstsuddi

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಬಳಿಯ ಕಣಿವೆ ಪ್ರದೇಶದಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ ಘಟನೆ ನಿನ್ನೆ ಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್‌ಕೋಚ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಬಸ್‌ನಲ್ಲಿ 50 ಜನ ಪ್ರಯಾಣ ಬೆಳೆಸಿದ್ದು, ಬಸ್ ಪಲ್ಟಿಯಿಂದಾಗಿ 38ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಬ್ಬರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ಉಳಿದ ಗಾಯಾಳುಗಳಿಗೆ ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ ನೆಲದ ಮೇಲೆ ಬೆಡ್ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲೇ ಮೃತಪಟ್ಟ ಮೂವರ ಪೈಕಿ ಇಬ್ಬರ ಗುರುತು ಪತ್ತೆಯಾಗಿದ್ದು, ಸಾಗರ ಮೂಲದ ಗಣಪತಿ (40), ಹೊನ್ನಾವರ ಮೂಲದ ಜಗದೀಶ್(45) ಎಂದು ಗುರುತಿಸಲಾಗಿದೆ. ಮತ್ತೋರ್ವ ಮೃತ ವ್ಯಕ್ತಿಯ ಗುರುತು ಈವರೆಗೆ ಪತ್ತೆಯಾಗಿಲ್ಲ. ಮೃತದೇಹಗಳನ್ನು ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಹೊಳಲ್ಕೆರೆ ಪಿಎಸ್ಐ ಸುರೇಶ್ ಭೇಟಿ ನೀಡಿ, ಪರಿಶೀಲನೆ ನೆಡೆಸಿದ್ದಾರೆ. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.