ಶಿಕ್ಷಕರು ಸಮಾಜದ ಎರಡು ಕಣ್ಣುಗಳು. ದೇಶ ಮುಂದುವರಿಯಬೇಕಾದರೆ ಅವರ ಪಾತ್ರ ಬಹಳ ಮುಖ್ಯ: ಎನ್.ಕೇಶವಮೂರ್ತಿ.

49

ಚಿಕ್ಕಮಗಳೂರು: ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಹರಟೆ ಖ್ಯಾತಿಯ ಪ್ರೊ.ಎಂ.ಕೃಷ್ಣೇಗೌಡ  ಅವರಿಂದ ನಡೆದ ಉಪನ್ಯಾಸ ಸಭಿಕರನ್ನು ನಗೆಗಡಲಲ್ಲಿ ತೇಲಿಸುವುದರ ಜೊತೆಗೆ ಅವರನ್ನು ಗಂಭೀರ ಚಿಂತನೆಗೂ ಹಚ್ಚಿತು. ಕಾರ್ಯಕ್ರಮವನ್ನು ಉದ್ಘಾಟಿಸಿ. ಮುಚ್ಚುಮರೆ ಇಲ್ಲದೆ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೇ ಅಂತರಾತ್ಮ ಕವನ ಗಾಯನದೊಂದಿಗೆ ಮಾತುಗಾರಿಕೆಯನ್ನು ಆರಂಭಿಸಿದ ಪ್ರೊ.ಎಂ.ಕೃಷ್ಣೇಗೌಡ ನವಿರು ಹಾಸ್ಯದ ಜೊತೆಗೆ ಗಂಭೀರ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಭಿಕರನ್ನು ಚಿಂತನೆಗೆ ಹಚ್ಚಿದರು. ಆಧುನಿಕತೆ ಮತ್ತು ಹೊಸ ಹೊಸ ತಂತ್ರಜ್ಞಾನಗಳಿಂದಾಗಿ ಪೇಪರ್ ರಹಿತ ವ್ಯವಹಾರದ ರೀತಿಯಲ್ಲೇ ಇನ್ನು ಕೆಲವೇ ವರ್ಷಗಳಲ್ಲಿ ಶಿಕ್ಷಕ ರಹಿತ ತರಗತಿಗಳು ಅಸ್ತಿತ್ವಕ್ಕೆ ಬಂದರೆ ಆಶ್ಚರ್ಯವಿಲ್ಲ. ಸರ್ಕಾರದ ಮೈಂಡ್ ಸೆಟ್ ಆ ರೀತಿ ಇದೆ. ಹಾಗಾಗಬಾರದು ತಮ್ಮ ಅಸ್ತಿತ್ವ ಉಳಿಯಬೇಕು ಎಂದರೆ ಶಿಕ್ಷಕರು ವರ್ಚುವಲ್
ತರಗತಿಗಳಿಗಿಂತ ನಾವು ಪಾಠ ಮಾಡುವುದೇ ಒಳ್ಳೆಯದು ಎಂಬುದನ್ನು ಖುದ್ದು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಅವರಿಗೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು. ಇಂದು ಶಿಕ್ಷಣದ ಕಾನ್ಸೆಪ್ಟ್ ಬದಲಾಗಿದೆ ಹಿಂದೆ ಶಿಕ್ಷಕರು ನಮಗೆ ಜ್ಞಾನವನ್ನು ಕೊಡುತ್ತಿದ್ದರು. ಆದರೆ ಈಗ ಜ್ಞಾನ ಅವರ ಬಳಿ ಇಲ್ಲ ಅದು ಮೊಬೈಲ್ ಗಳಲ್ಲಿ ಗೂಗಲ್ ನಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿದೆ ಹಾಗಾಗಿ ಶಿಕ್ಷಕರು ಉಳಿಯಬೇಕಾದರೆ ಅದಕ್ಕಿಂತ ಹೆಚ್ಚಿನದನ್ನೇನಾದರೂ ಕೊಡಬೇಕು. ತಮ್ಮ ಜ್ಞಾನವನ್ನು ಭೋದನಾ ಸಾಮರ್ಥ್ಯವನ್ನು ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಇಲ್ಲದಿದ್ದರೆ ಉಳಿಗಾಲವಿಲ್ಲ ಎಂದರು. ಶಿಕ್ಷಕರ ದಿನಾಚರಣೆ ಶಿಕ್ಷಕರ ಆತ್ಮಾವಲೋಕನದ ದಿನ. ನಾವು ಎಲ್ಲಿ ನಿಂತಿದ್ದೇವೆ ಎಂದು ಶಿಕ್ಷಕರು ನೋಡಿಕೊಳ್ಳಬೇಕು. ಇಲ್ಲದಿದ್ದರೆ ಈ ಬದುಕಿಗೆ ಅರ್ಥವಿರುವುದಿಲ್ಲ. ನಿವೃತ್ತಿಯ ನಂತರ ಸಂತೋಷವಾಗಿ ಇರಲಾಗುವುದಿಲ್ಲ ಎಂದು ಕಿವಿಮಾತು ಹೇಳಿದರು. ಸುಖ ಸಂತೋಷವನ್ನು ನಾವು ನಮ್ಮೊಳಗೆ ಹುಡುಕಬೇಕು. ಅದು ಹೊರಗಡೆ ಎಲ್ಲೂ ಸಿಗುವುದಿಲ್ಲ ಸುಖ ಸಂತೋಷವನ್ನು ಇಂದು ನಾವು ನಮ್ಮೊಳಗೆ ಬಿಟ್ಟು ಹೊರಗೆ ಎಲ್ಲಾ ಕಡೆ ವ್ಯರ್ಥವಾಗಿ ಹುಡುಕುತ್ತಿದ್ದೇವೆ ನಾವು ನಮ್ಮ ಒಳಗನ್ನು ಸಂಪನ್ನಗೊಳಿಸಿಕೊಳ್ಳದಿದ್ದರೆ ಸಮೃದ್ಧಗೊಳಿಸಿಕೊಳ್ಳದಿದ್ದರೆ ನಮ್ಮ ಹೊರಗಿನ ಆಟ ಹೆಚ್ಚು ದಿನ ನಡೆಯುವುದಿಲ್ಲ ಎಂದು ಹೇಳಿದರು. ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ ತಮ್ಮ ಸಂಸ್ಥೆಗೆ ಮತ್ತು ಮಕ್ಕಳ ಭವಿಷ್ಯಕ್ಕಾಗಿ ನಿರಂತರವಾಗಿ ದುಡಿದಿರುವವರಿಗೆ ಗುರು ನಮನ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ಶಿಕ್ಷಕರು ಸಮಾಜದ ಎರಡು ಕಣ್ಣುಗಳು. ದೇಶ ಮುಂದುವರಿಯಬೇಕಾದರೆ ಅವರ ಪಾತ್ರ ಬಹಳ ಮುಖ್ಯ ಎಂದರು. ಇದೇ ವೇಳೆ ಸಂಸ್ಥೆಯಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಭೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು. 25 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಮಲೆನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಡಾ.ಜೆ.ಪಿ.ಕೃಷ್ಣೇಗೌಡ. ರಾಧಾ ಸುಂದರೇಶ್. ಸಹಕಾರ್ಯದರ್ಶಿ ಶಂಕರನಾರಾಯಣ ಭಟ್. ಕಾರ್ಯಕಾರಿ ಮಂಡಳಿ ಸದಸ್ಯೆ ಜಯಶ್ರೀ ಜೋಶಿ. ಶೈಕ್ಷಣಿಕ ಸಲಹೆಗಾರ ಕೆ.ಎನ್.ಮಂಜುನಾಥ ಭಟ್. ಕಚೇರಿ ವ್ಯವಸ್ಥಾಪಕಿ ಶ್ರೀ ಲಕ್ಷ್ಮಿ ಶಿಕ್ಷಕಿ ಎನ್.ರೂಪ ಉಪಸ್ಥಿತರಿದ್ದರು.