ಚಿತ್ರದುರ್ಗದಲ್ಲಿ ಧಾರಕಾರವಾಗಿ ಸುರಿದ ಮಳೆಗೆ ಕೋಟೆನಾಡು ತತ್ತರ.

27

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೋಟೆನಾಡು ತತ್ತರಿಸಿ ಹೋಗಿದೆ. ಚಿತ್ರದುರ್ಗದ ಹಲವು ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹಾಗೂ ಸುತ್ತಮುತ್ತಲ ಪ್ರದೇಶಗಳು ಮಳೆಯ ನೀರಿನಿಂದ ರಾತ್ರಿಯಿಡೀ ಜಲಾವೃತಗೊಂಡಿದ್ದರಿಂದ ತೀವ್ರ ತೊಂದರೆ ಎದುರಾಯಿತು. ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ಚಿಕ್ಕಕೆರೆಯಿಂದ ನೀರು ಹರಿದು ಬಂದಿದೆ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪೊಲೀಸ್ ಠಾಣೆಗೆ ನೀರು ನುಗ್ಗಿದ್ದು, ಠಾಣೆ ಕೆರೆಯಂತಾಗಿದೆ. ಇದರಿಂದ ಅಕ್ಷರಶಃ ಪೊಲೀಸ್ ಠಾಣೆ ಕಟ್ಟಡ ನೀರಿನಿಂದ ತುಂಬಿಕೊಂಡಿದೆ. ಇದಲ್ಲದೆ ಮನೆ, ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿದೆ. ಇದರೊಂದಿಗೆ ಹೊರಮಠದ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನವೂ ಮುಳುಗಡೆಯಾಗಿದೆ. ಸೋಮವಾರ ರಾತ್ರಿ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಟ್ರ್ಯಾಕ್ಟರ್ ಕೊಚ್ಚಿ ಹೋಗಿದೆ.
ಧಾರಕಾರವಾಗಿ ಸುರಿದ ಮಳೆಯ ನೀರಿನಿಂದ ಠಾಣೆಯಲ್ಲಿ ಮೊಳಕಾಲುದ್ದ ನೀರು ನಿಂತಿತ್ತು. ಹೀಗಾಗಿ ನೀರು ನುಗ್ಗಿದ್ದರಿಂದ ಕಚೇರಿಯೊಳಗಿನ ದಾಖಲೆಗಳನ್ನು ರಕ್ಷಿಸಲು ಪೊಲೀಸರಿಗೆ ತೊಂದರೆಯಾಯಿತು. ದೇವರಹಟ್ಟಿಗೆ ತೆರಳುತ್ತಿದ್ದ ನಾಲ್ಕು ಜನರಿದ್ದ ಕಾರು ನಾಯಕನಹಟ್ಟಿ ಗ್ರಾಮದ ಬಳಿ ಕೊಚ್ಚಿ ಹೋಗಿದೆ. ಆದರೆ ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಅಪಾಯದಿಂದ ಪಾರಾಗಿದ್ದಾರೆ.