ಬೆಂಗಳೂರು: ವಾರದ ರಜಾ ಕಳೆಯಲು ರಾಮನಗರ ಬಳಿಯ ನಗರದ ಹೊರವಲಯದಲ್ಲಿರುವ ಫಾರ್ಮ್‍ಹೌಸ್‍ಗೆ ತೆರಳಿದ್ದ ಬಸವೇಶ್ವರನಗರದ ಏಳು ಮಂದಿ ಪದವಿ ವಿದ್ಯಾರ್ಥಿಗಳ ಗುಂಪಿನ ಮೇಲೆ ಮೂವರು ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ರಾಮನಗರ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯ ಚಿಕ್ಕನಹಳ್ಳಿಯ ಎಪಿಎಸ್ ಲೇಔಟ್‍ನಲ್ಲಿರುವ ಫಾರ್ಮ್‍ಹೌಸ್‍ನಲ್ಲಿ ಶನಿವಾರ ರಾತ್ರಿ 10.30 ರ ಸುಮಾರಿಗೆ ಘಟನೆ ನಡೆದಿದೆ.
ಆರೋಪಿಗಳು ತೋಟದ ಮನೆಯೊಳಗೆ ನುಗ್ಗಿ ಈಜುತ್ತಿದ್ದ ಇಬ್ಬರು ಹುಡುಗಿಯರ ಚಿತ್ರೀಕರಿಸಲು ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದರು. ಅವರನ್ನು ತಡೆಯಲು ಪ್ರಯತ್ನಿಸಿದ್ದ ಯುವತಿಯ ಜೊತೆಯಿದ್ದ ಇತರರ ಮೇಲೆ ಮರದ ದಿಮ್ಮಿಗಳಿಂದ ಹಲ್ಲೆ ನಡೆಸಲಾಯಿತು.
ಮೂವರು ಆರೋಪಿಗಳು ಸ್ಥಳೀಯರು ಎಂದು ಹೇಳಿಕೊಂಡು ಒಳಗೆ ನುಗ್ಗಿ ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಕೂಗಾಡಲು ಪ್ರಾರಂಭಿಸಿದರು. ಇಲ್ಲಿಗೆ ಬರಲು ನಿಮಗೆ ಅನುಮತಿ ನೀಡಿದವರು ಯಾರು ಎಂದು ಕೇಳಿ ನಮ್ಮನ್ನು ನಿಂದಿಸಲು ಪ್ರಾರಂಭಿಸಿದರು. ನಂತರ ಆರೋಪಿಗಳು ಹುಡುಗಿಯರ ಫೋಟೋ ತೆಗೆಯಲು ಪ್ರಾರಂಭಿಸಿದರು. ಇತರ ವಿದ್ಯಾರ್ಥಿಗಳು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿಗಳು ಮರದ ದಿಮ್ಮಿಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು 22 ವರ್ಷ ವಯಸ್ಸಿನ ವಿದ್ಯಾರ್ಥಿಯೊಬ್ಬರು ನೀಡಿದ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಆಗಮಿಸಿದ ನಂತರ ಗಂಭೀರವಾಗಿ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಕೆಂಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂತ್ರಸ್ತ ಇಬ್ಬರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಈ ಘಟನೆಯ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.










