ಮುಡಾ ಪ್ರಕರಣ: ನಾಳೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗುತ್ತಿದ್ದೇನೆ: ಸಿಎಂ ಸಿದ್ದರಾಮಯ್ಯ.

27

ಹುಬ್ಬಳ್ಳಿ: ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ್ದು ನಾಳೆ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದೇ ಕಾರು ಹತ್ತಿ ಶಿಗ್ಗಾಂವಿ ಉಪ ಚುನಾವಣಾ ಪ್ರಚಾರಕ್ಕೆ ಹೊರಟರು. ಮುಡಾ ಪ್ರಕರಣದ ತನಿಖೆಯ ಭಾಗವಾಗಿ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ನಿನ್ನೆಯಿಂದಲೂ ಸಿಎಂ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು. ಸಿದ್ದರಾಮಯ್ಯನವರ ಶಕ್ತಿ ಅಡಗಿಸಲು ಸಾಧ್ಯವಿಲ್ಲ-ತಿಮ್ಮಾಪುರ. ಸಿದ್ದರಾಮಯ್ಯನವರ ನಾಯಕತ್ವ ಮತ್ತು ಶಕ್ತಿ ಕುಂದಿಸಲು ಬಿಜೆಪಿಗರು ಪ್ರಯತ್ನಿಸುತ್ತಿದ್ದಾರೆ. ಇದು ಯಾವುದೇ ಕಾರಣಕ್ಕೂ ನಡೆಯುವುದಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು. ನಗರದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲೋಕಾಯಕ್ತ ಸಿದ್ದರಾಮಯ್ಯನವರಿಗೆ ನೋಟಿಸ್ ನೀಡಿದೆ. ಕೇಂದ್ರದ ನಾಯಕರು ಸಿದ್ದರಾಮಯ್ಯನವರ ಶಕ್ತಿ ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಇದ್ಯಾವುದೂ ಅವರ ಮುಂದೆ ನಡೆಯಲ್ಲ ಎಂದರು.