ಸಿನಿಮಾ ಅರ್ಧಕ್ಕೆ ಸ್ಥಗಿತಗೊಳಿಸಿದ ನಿರ್ದೇಶಕನ ಬೆದರಿಸಲು ಏರ್ ಫೈರ್ ಮಾಡಿದ ನಟ ತಾಂಡವ್ ರಾಮ್ ಬಂಧನ.

25

ಬೆಂಗಳೂರು: ಸಿನಿಮಾ ಅರ್ಧಕ್ಕೆ ಸ್ಥಗಿತಗೊಳಿಸಿದ ನಿರ್ದೇಶಕನನ್ನು ಬೆದರಿಸಲು ಗುಂಡು ಹಾರಿಸಿದ ಆರೋಪದಡಿ ನಟ ತಾಂಡವ್ ರಾಮ್ ಅವರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುಗಿಲ್ ಪೇಟೆ ಸಿನಿಮಾ ಖ್ಯಾತಿಯ ನಿರ್ದೇಶಕ ಭರತ್ ಎಸ್ ನಾವುಂಡ ಅವರನ್ನು ಬೆದರಿಸಲು ಏರ್ ಫೈರ್ ಮಾಡಿದ್ದ ತಾಂಡವ್ ರಾಮ್ ಅವರನ್ನು ಹತ್ಯೆ ಯತ್ನದ ಆರೋಪದಡಿ ಬಂಧಿಸಲಾಗಿದೆ. ಜೋಡಿಹಕ್ಕಿ, ಭೂಮಿಗೆ ಬಂದ ಭಗವಂತ ಮತ್ತಿತರೆ ಧಾರಾವಾಹಿ ಹಾಗೂ ಒಂದ್ ಕಥೆ ಹೇಳ್ಲಾ ಸಿನಿಮಾದಲ್ಲಿ ನಟಿಸಿರುವ ತಾಂಡವ್ ರಾಮ್ ನಟನೆಯಲ್ಲಿ ಸಿನಿಮಾವೊಂದನ್ನು ಭರತ್ ನಾವುಂಡ ನಿರ್ದೇಶಿಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾದ ಕೆಲಸಗಳು ಅರ್ಧಕ್ಕೆ ನಿಂತಿದ್ದವು. ಸಿನಿಮಾ ವಿಚಾರವಾಗಿ ಮಾತನಾಡಲು ಚಂದ್ರಾ ಲೇಔಟ್‍ನಲ್ಲಿರುವ ಭರತ್ ಅವರ ಕಚೇರಿಗೆ ಸೋಮವಾರ ತಾಂಡವ್ ರಾಮ್ ಬಂದಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿಗೆದ್ದ ತಾಂಡವ್ ರಾಮ್ ತಮ್ಮ ಬಳಿ ಇದ್ದ ಪರವಾನಗಿ ಹೊಂದಿರುವ ಪಿಸ್ತೂಲ್‍ನಿಂದ ಏರ್ ಫೈರ್ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದು ಉದ್ದೇಶಪೂರ್ವಕ ನಡೆದ ಘಟನೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಯನ್ನು ಬಂಧಿಸಿದ್ದೇವೆ ಮತ್ತು ಆ ವೆಪನ್ ಜಪ್ತಿ ಮಾಡಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಮಾಹಿತಿ ನೀಡಿದ್ದಾರೆ.