ರಾಂಚಿ: ಜಾರ್ಖಂಡ್ ನಲ್ಲಿ ಬಿಜೆಪಿ ನೇತೃತ್ವದ ಎನ್‍ಡಿ ಹಾಗೂ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟದ ನಡುವಿನ ತೀವ್ರ ಪೈಪೋಟಿ ಮುಂದುವರಿದಿದೆ. ರಾಜ್ಯದ ಜನರು ಪ್ರಸ್ತುತವಿರುವ ಹೇಮಂತ್ ಸೊರೆನ್ ಸರ್ಕಾರದ ಮೇಲೆ ಮತ್ತೆ ನಂಬಿಕೆ ಇಟ್ಟಿರುವಂತೆ ತೋರುತ್ತಿದೆ. ಇಲ್ಲಿಯವರೆಗೆ ನಡೆದ ಮತ ಎಣಿಕೆ ಬಳಿಕ ಜೆಎಂಎಂ ನೇತೃತ್ವದ ಇಂಡಿ ಒಕ್ಕೂಟ, ಎನ್‍ಡಿಎ ಮೈತ್ರಿಕೂಟವನ್ನು ಹಿಂದಿಕ್ಕಿ ಮುನ್ನಡೆಯಲ್ಲಿದೆ. 81 ವಿಧಾನಸಭಾ ಕ್ಷೇತ್ರಗಳ ಪೈಕಿ, ಜೆಎಂಎಂ ಕಾಂಗ್ರೆಸ್ ಆರ್‍ಜೆಡಿ ಮೈತ್ರಿ 50 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಎನ್‍ಡಿಎ ಮೈತ್ರಿಕೂಟ 29 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಮತ ಎಣಿಕೆ ಆರಂಭಗೊಂಡಾಗ ಎನ್‍ಡಿಎ ಮೈತ್ರಿಕೂಟ, ಇಂಡಿ ಒಕ್ಕೂಟಕ್ಕಿಂತ ಮುನ್ನಡೆಯಲ್ಲಿತ್ತು. ಆದರೆ ಕೆಲವೇ ಸುತ್ತಿನ ಮತ ಎಣಿಕೆಯಲ್ಲಿ ಇಂಡಿಯಾ ಮೈತ್ರಿಕೂಟ ಮುನ್ನಡೆ ಸಾಧಿಸಿತು. ಜಾಖರ್ಂಡ್‍ನಲ್ಲಿ 81 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 67.74 ಶೇ. ಮತದಾನ ನಡೆದಿತ್ತು. ಜಾಖರ್ಂಡ್ ರಾಜ್ಯ ರಚನೆಯಾದ 24 ವರ್ಷಗಳಲ್ಲಿ ದಾಖಲಾದ ಅತ್ಯಂತ ಅಧಿಕ ಮತದಾನ ಇದಾಗಿದೆ.









