ನವದೆಹಲಿ: ದೆಹಲಿ ಮದ್ಯ ನೀತಿ ಅಕ್ರಮದಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 2,026 ಕೋಟಿ ರೂಪಾಯಿ ಆದಾಯ ನಷ್ಟವಾಗಿದೆ ಎಂದು ಸಿಎಜಿ ಮಾಹಿತಿ ನೀಡಿದೆ. ಮದ್ಯ ನೀತಿಯಲ್ಲಿ ಬಹಳಷ್ಟು ಲೋಪದೋಷಗಳು ಕಂಡುಬಂದಿದ್ದು, ಪರವಾನಗಿ ನೀಡುವಲ್ಲಿ ನಿಯಮ ಉಲ್ಲಂಘನೆ ಮಾಡಿರುವುದು ಮಾಹಿತಿಯಲ್ಲಿ ಕಂಡುಬಂದಿದೆ ಎಂದು ಸುದ್ದಿಗಾರರು ವರದಿ ಮಾಡಿವೆ. ಈ ಹಿಂದೆ ಕೇಜ್ರಿವಾಲ್ ನೇತೃತ್ವದ ಸರ್ಕಾರ ಜಾರಿಗೊಳಿಸಿದ್ದ ಮದ್ಯ ನೀತಿಯು ಉದ್ದೇಶಿತ ಗುರಿ ಸಾಧಿಸುವಲ್ಲಿ ವಿಫಲವಾಗಿದೆ. ಮುಖ್ಯವಾಗಿ ಆಪ್ ನಾಯಕರು ಕಿಕ್‍ಬ್ಯಾಕ್ ಲಾಭ ಪಡೆಯಲಾಗಿದೆ. ಮದ್ಯ ನೀತಿ ಅನುಷ್ಠಾನಗೊಳಿಸುವಲ್ಲಿ ಅಂದಿನ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನೇತೃತ್ವದ ಸಚಿವರ ಗುಂಪು ತಜ್ಞರ ಸಮಿತಿಯ ಶಿಫಾರಸುಗಳನ್ನು ಕಡೆಗಣಿಸಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಮಾಹಿತಿಗಳು ತಿಳಿಸಿವೆ. ನೂತನ ಮದ್ಯ ನೀತಿ ದೆಹಲಿಯ ವಿಧಾನಸಭೆಯಲ್ಲಿ ಮಂಡನೆಯಾಗದೆಯೇ ಜಾರಿಗೆ ತರಲಾಗಿದೆ. ನೀತಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಕ್ಯಾಬಿನೆಟ್ ಅಥವಾ ರಾಜ್ಯಪಾಲರ ಅನುಮೋದನೆಯಿಲ್ಲದೆ ತೆಗೆದುಕೊಳ್ಳಲಾಗಿದೆ. ಹೆಚ್ಚುವರಿಯಾಗಿ ನಿಯಮ ವಿಧಿಸುವವರಿಗೆ ಉದ್ದೇಶಪೂರ್ವಕವಾಗಿ ದಂಡ ವಿಧಿಸುವುದನ್ನು ಕೈಬಿಡಲಾಗಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿ ತಿಳಿಸಿದೆ.










